ಭಟ್ಕಳ; ಬದುಕು ಹೋರಾಟಮಯವಾಗಿದ್ದರೆ ಯಾರನ್ನು ಎಲ್ಲಿಗೆ ಬೇಕಾದರೂ ತಂದು ಮುಟ್ಟಿಸುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ನಾವು ಆಗಾಗ ಕಾಣುತ್ತಲೇ ಇರುತ್ತೇವೆ. ಇದಕ್ಕೆ ಇಂಬು ನೀಡುವಂತೆ ಮತ್ತೊಂದು ನಿರ್ದೇಶನ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಮತ್ತು ಬಂದರು ಸಚಿವ ಮಂಕಾಳು ವೈದ್ಯರವರು. ಬಾಲ್ಯದಲ್ಲಿ ಕಡುಬಡತನದಲ್ಲೇ ಬೆಳೆದ ಗೇಣುದ್ದ ಹೊಟ್ಟೆ ತುಂಬಿಸಿಕೊಳ್ಳಲು ಶಿಕ್ಷಣಕ್ಕೆ ತೀಲಾಂಜಲಿ ನೀಡಿ ಹೊಟೆಲ್ ಸೇರಿದಂತೆ ಹಲವು ಕಡೆ ಕೂಲಿ ಮಾಡಿ ಬದುಕಿಗೊಂದು ಆಸೆ ಕೊಂಡುಕೊಳ್ಳಲು ಯತ್ನಿಸಿದವರು. ಆದರೆ ಮನಸ್ಸಿನಲ್ಲಿ ತಾನು ಏನನ್ನಾದರೂ ಸಾಧಿಸಬೇಕು ಎಂಬ ಕನಸು ಕಾಣುತ್ತಲೇ ಜೀವನದ ಬಂಡಿ ಎಳೆಯುತ್ತಾ ಸ್ವತಂತ್ರ ವೃತ್ತಿ ಪ್ರಾರಂಭಿಸಿದರು.
ಬದುಕಿನಲ್ಲಿ ನಡೆದ ಒಂದು ಚಿಕ್ಕ ಘಟನೆ ಅವರನ್ನು ರಾಜಕೀಯಕ್ಕೆ ಎಳೆದು ತಂದಿತು. ವೃತ್ತಿಯಲ್ಲಿ ಆರ್ಥಿಕ ಭದ್ರತೆ ಕಾಣುತ್ತಿದ್ದಂತೆ ದುರ್ಬಲರಿಗೆ ಸಹಕರಿಸುವ ಮನೋವೃತ್ತಿ ಬೆಳೆಸಿಕೊಂಡರು. ಈ ಬಗ್ಗೆ ಸಮಾನ ಮನಸ್ಕರ ಜೊತೆ ಚಿಂತನೆ, ಚರ್ಚೆ ಮಾಡುತ್ತಾ ದಿನೇ ದಿನೇ ಜನಸಾಮಾನ್ಯರಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡರು. ಜಿಲ್ಲಾ ಪಂಚಾಯತ್ ಸದಸ್ಯನಾಗುವ ಕನಸು ಕಂಡ ಇವರಿಗೆ ರಾಜಕೀಯ ರಂಗದಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೇ ಇರುವುದರಿಂದ ರಾಜಕೀಯ ಪಕ್ಷಗಳು ಜಿಲ್ಲಾ ಪಂಚಾಯತ್ ಟಿಕೆಟ್ ನೀಡದೇ ಇದ್ದಾಗ ಸ್ವತಂತ್ರವಾಗಿ ಭಟ್ಕಳದ ಜಾಲಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಬಂದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಮೇಲೆ ಜನಪರ ಕೆಲಸ ಮಾಡುವುದರ ಮೂಲಕ ಮತ್ತಷ್ಟು ಜನಾನುರಾಗಿಯಾದರು. ಇದರಿಂದ ಸಹಜವಾಗಿ ಅವರಿಗೆ ರಾಜಕೀಯ ವಿರೋಧಿಗಳು ಹುಟ್ಟಿಕೊಂಡರು. ವೈದ್ಯರನ್ನು ರಾಜಕೀಯವಾಗಿ ಮುಗಿಸಲು ಮುಂದಿನ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಿದ್ದ ಕ್ಷೇತ್ರದಲ್ಲಿ ಮೀಸಲಾತಿ ತಂದು ಅವರು ಆ ಕ್ಷೇತ್ರದಲ್ಲಿ ಸ್ಪರ್ಧಿಸಿದಂತೆ ಮಾಡಿದರು. ಇದರಿಂದ ಒಮ್ಮೆ ವಿಚಲಿತವಾದ ವೈದ್ಯರು ರಾಜಕೀಯವೇ ಬೇಡ ಎಂದು ಸುಮ್ಮನೆ ಇರಲು ಪ್ರಯತ್ನಿಸಿದರೂ ಅವರ ಮನಸ್ಸು ಕೇಳಲಿಲ್ಲ .ಕಳೆದುಕೊಂಡಿದ್ದನ್ನು ಕಳೆದುಕೊಂಡು ಜಾಗದಲ್ಲಿಯೇ ಹುಡುಕಬೇಕು ಎನ್ನುವ ಗುರಿಯೊಂದಿಗೆ
ರಾಜಕೀಯದಲ್ಲಿ ವಿರೋಧಿಗಳನ್ನು ರಾಜಕೀಯ ರಂಗದಲ್ಲೇ ಎದುರಿಸಿ ತಾನೇನು ಎಂಬುದನ್ನು ತೋರಿಸಬೇಕು. ತನ್ನನ್ನು ಅವಮಾನಿಸಿದವರು ಅದೇ ಕೈಗಳಿಂದ ಚಪ್ಪಾಳೆ ತಟ್ಟಿ ಅಭಿನಂದಿಸಬೇಕು ಎಂದು ಛಲತೊಟ್ಟು ಮಾವಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದರು. ಹೊಸದಾದ ಪ್ರದೇಶ, ಹೊಸ ಮತದಾರರು. ಆದರೆ ಎಲ್ಲಾ ಕ್ಷೇತ್ರದೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ವೈದ್ಯರನ್ನು ಆ ಮತ ಕ್ಷೇತ್ರದ ಮತದಾರರು ಕೈ ಹಿಡಿದರು. ಇದರಿಂದ ಎರಡನೇ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು. ಈ ಬಾರಿ ಕಾಂಗ್ರೆಸ್ ನ ಬೆಂಬಲ ಪಡೆದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರೂ ಆದರು.
2013ರಲ್ಲಿ ವಿಧಾನಸಭಾ ಚುನಾವಣೆ ಬಂದಾಗ ಕಾಂಗ್ರೆಸ್ ಇವರಿಗೆ ಸ್ಪರ್ಧಿಸಲು ಅವಕಾಶ ನೀಡುತ್ತದೆ ಎಂದು ಬಲವಾಗಿ ನಂಬಿದ್ದರು. ಇಲ್ಲೂ ಕೂಡ ರಾಜಕೀಯ ಮೇಲಾಟ, ಗಾಡ್ ಫಾದರ್ ಇಲ್ಲದಿರುವುದರಿಂದ ಅವರಿಗೆ ಟಿಕೆಟ್ ನಿರಾಕರಿಸಿತು. ವಿಧಾನಸಭೆಗೆ ಸ್ಪರ್ಧಿಸಲೇ ಬೇಕು ಎಂಬ ಛಲದಂಕನಾಗಿದ್ದ ವೈದ್ಯರು ಟಿಕೆಟ್ ನಿರಾಕರಿಸಿದಕ್ಕೆ ನಿರಾಸೆಗೊಂಡು ಸುಮ್ಮನೆ ಕೂರದೆ ಆದದ್ದಾಗಲಿ ಎಂದು ಪಕ್ಷೇತರರಾಗಿ ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಬಿಟ್ಟರು. ನಂತರ ನಡೆದದ್ದು ಇತಿಹಾಸ. ಪಕ್ಷೇತರಾಗಿ ಗೆದ್ದ ಅವರು ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆಯಲು ಅತಂತ್ರವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಆಸರೆಯಾದರು. ಇದರಿಂದ ಬರಪೂರ ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ದರು. ಎಷ್ಟೇ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ದರೂ ರಾಜಕೀಯ ವಿರೋಧಿಗಳ ಮೇಲಾಟ 2018ರ ಚುನಾವಣೆಯಲ್ಲಿ ಅಲ್ಪ ಮತದಿಂದ ಸೋಲಿಸಿತು. ಆದರೂ ವೃತ್ತಿಗಳದೇ ಐದ್ ವರ್ಷಗಳ ಕಾಲ ಜನಸಾಮಾನ್ಯರ ಕಷ್ಟಕ್ಕೆ ನೆರವಾಗುತ್ತದೆ ಕ್ಷೇತ್ರದ ಜನತೆಯ ಹೃದಯದಲ್ಲಿ ಸ್ಥಾನ ಪಡೆದರು. ಇದರಿಂದ 2023ರ ಚುನಾವಣೆಯಲ್ಲಿ ಅನಾಯಾಸವಾಗಿ ಗೆದ್ದು ಶಾಸಕರಾದುದ್ದಲ್ಲದೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯದ ಬಂದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಛಲಕ್ಕೆ ಬಿದ್ದರೆ ಮಂಕಾಳು ವೈದ್ಯರು ಸಾಧಿಸಿಯೇ ಸಿದ್ಧ ಎಂಬುದನ್ನು ಸಾಧಿಸಿ ಮಾದರಿಯಾದರು. ಕೂಲಿ ಬದುಕನ್ನು ಅನುಭವಿಸಿದ ಕಷ್ಟ ಗೊತ್ತಿರುವ ವೈದ್ಯರು ಸಚಿವನಾಗಿದ್ದರೂ ತಮ್ಮಲ್ಲಿ ಬರುವ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಂಡು ಜನತೆಗೆ ಸ್ಪಂದಿಸುತ್ತಿರುವುದು ಕ್ಷೇತ್ರದ ಜನತೆ ಹೆಮ್ಮೆ ಪಡುವಂತಾಗಿದೆ.
Leave feedback about this