ಮಂಡ್ಯ : ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಹೆಸರಾದ ಗೊ.ರು. ಚೆನ್ನಬಸಪ್ಪ ರವರು ಡಿಸೆಂಬರ ತಿಂಗಳು ೨೦ ರಿಂದ ೨೨ ರ ವರೆಗೆ ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯೇತರಿಗೆ ಮಣೆ ಹಾಕಲಾಗುವ ಸಂಬಂಧ ಹಿಟ್ಟಿಕೊಂಡ ಚರ್ಚೆಗೆ ಇತೀಶ್ರೀ ಹಾಕಲಾಗಿದೆ.
ಬಾಲ್ಯ ಜೀವನ : ಗೊ. ರು. ಚೆನ್ನಬಸಪ್ಪನವರು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಗೊಂಡೇದಹಳ್ಳಿಯಲ್ಲಿ ೧೮ನೇ ಮೇ ೧೯೩೦ರಲ್ಲಿ ಜನಿಸಿದರು. ಅವರ ತಂದೆ ತಿಂಗಳಿಗೆ ಏಳು ರೂ. ಸಂಬಳದಲ್ಲಿ ಅನುದಾನಿತ ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿದ್ದರು. ಅವರ ತಾಯಿಯವರು ಕಂಡವರ ಹೊಲಕ್ಕೆ ದಿನಕ್ಕೆ ಮೂರು ಆಣೆ ಕೂಲಿಗೆ ಹೋಗುತ್ತಿದ್ದರಂತೆ . ರಜದ ದಿನಗಳಲ್ಲಿ ಬಾಲಕ ಚನ್ನಬಸಪ್ಪನವರೂ ಕೂಲಿಗೆ ಹೋಗುತ್ತಿದ್ದರು. ಅವರಿಗೆ ದಿನಕ್ಕೆ ಒಂದೂವರೆ ಆಣೆ ಕೂಲಿ ಸಿಗುತ್ತಿತ್ತು. “ಆ ಹಣಕ್ಕಿಂತ ಮುಖ್ಯವಾಗುತ್ತಿದ್ದುದು ನಾವು ಕೂಲಿ ಹೋಗುತ್ತಿದ್ದ ಹೊಲದವರು ಕೊಡುತ್ತಿದ್ದ ಒಂದುಹೊತ್ತಿನ ಊಟ!” ಎಂದು ಸ್ವತಃ ಗೊ.ರು. ಚ. ರವರೇ ತಮ್ಮ ಬಾಲ್ಯವನ್ನು ಅನಾವರಣಗೊಳಿಸಿದ್ದಾರೆ.
ಪ್ರಮುಖ ಕೃತಿಗಳು :
ಬಾಲ್ಯದ ಕಷ್ಟದ ಬದುಕನ್ನೇ ಸವಾಲಾಗಿ ಸ್ವೀಕರಿಸಿ ಮೆಟ್ಟಿನಿಂತು ಉನ್ನತ ಶಿಕ್ಷಣ ಪಡೆದು ೧೯೪೮ರ ವರ್ಷದಲ್ಲಿ ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಗಾಂಧೀ ಗ್ರಾಮದಲ್ಲಿ ಸಮಾಜ ಶಿಕ್ಷಣ ತರಬೇತಿಯನ್ನು ಪಡೆದವರು. ಭೂದಾನ ಚಳುವಳಿ, ವಯಸ್ಕರ ಶಿಕ್ಷಣ ಮತ್ತು ಸೇವಾದಳಗಳಲ್ಲಿ ನಿಷ್ಠಾವಂತರಾಗಿ ಚನ್ನಬಸಪ್ಪನವರು ಸೇವೆ ಸಲ್ಲಿಸುತ್ತಲೇ ಸಾಹಿತ್ಯದ ಓದಿನೊಂದಿಗೆ ಕನ್ನಡ ಸಾಹಿತ್ಯದ ಸಾರಸ್ವತ ಲೋಕಕ್ಕೆ ಅಮೂಲಾಗ್ರ ಕೃತಿಗಳನ್ನು ನೀಡಿದ್ದಾರೆ. ಪ್ರಮುಖ ಕೃತಿಗಳೆಂದರೆ ಮಹಾದೇವಿ, ಸದಾಶಿವ ಶಿವಾಚಾರ್ಯ,ಕರ್ನಾಟಕ ಪ್ರಗತಿಪಥ,ಚೆಲುವಾಂಬಿಕೆ,ಕುನಾಲ,ಸಾಕ್ಷಿ ಕಲ್ಲು,ಬೆಳ್ಳಕ್ಕಿ ಹಿಂಡು ಬೆದರ್ಯಾವೊ,ಬಾಗೂರು ನಾಗಮ್ಮ,ಗ್ರಾಮ ಗೀತೆಗಳು,ವಿಭೂತಿ,ಕರ್ನಾಟಕ ಜನಪದಕಲೆಗಳು ಗೊ.ರು. ಚನ್ನಬಸಪ್ಪನವರ ಪ್ರಮುಖ ಬರಹಗಳು.