ಕುಮಟಾ : ನಗರದ ಹೃದಯ ಭಾಗದಲ್ಲಿರುವ ಉಪ್ಪಿನ ಗಣಪತಿ ದೇವಸ್ಥಾನ ಪುರಾತನವಾದುದು. ಇಲ್ಲಿಗೆ ಬರುವ ಭಕ್ತರು ಉಪ್ಪನ್ನು ಅತ್ಯಂತ ಶೃದ್ಧಾ ಭಕ್ತಿಪೂರ್ವಕದಿಂದ ನೈವೇದ್ಯವಾಗಿ ಅರ್ಪಿಸುವುದು ವಿಶೇಷ. ತಮಗೊದಗಿದ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕೆ ಉಪ್ಪನ್ನು ಹರಕೆರೂಪದಲ್ಲಿ ಪ್ರತಿ ವರ್ಷ ಇಲ್ಲವೇ ವಿಶೇಷವಾಗಿ ಪ್ರತಿ ಸಂಕಷ್ಠಿಯಂದು ಭಕ್ತರು ಅರ್ಪಿಸುತ್ತಾರೆ. ಉಳಿದ ದಿನಗಳಲ್ಲೂ ಪೂಜಾ ಸಂದರ್ಭದಲ್ಲಿ ಉಪ್ಪನ್ನು ನೀಡುತ್ತಾರಾದರೂ ಸಂಕಷ್ಠಿಯಂದು ವಿಶೇಷವಾಗಿರುತ್ತದೆ.
. ನೈವೇದ್ಯಕ್ಕೆ ತಂದ ಉಪ್ಪನ್ನು ದೇವರ ಮುಂದೆ ತೋರಿಸಿ ಪ್ರದಕ್ಷಿಣೆ ಹಾಕಿ ದೇವಸ್ಥಾದ ಹೊರಗೆ ಸಂಗ್ರಹಕ್ಕೆ ಇಟ್ಟಿರುವ ದೋಣಿಯಲ್ಲಿ ಹಾಕುವ ಪೂರ್ವದಲ್ಲಿ ಒಂದೆರಡು ಹರಳು ಉಪ್ಪ್ನು ಸೇವಿಸುತ್ತಾರೆ. ಅಂಗಾರಕ ಸಂಕಷ್ಟಿಯಂದು ೫-೬ ಕ್ವಿಂಟಲ್ ಉಪ್ಪು ಸಂಗ್ರಹವಾಗುತ್ತದೆ ಎಂದರೆ ಶ್ರೀ ದೇವರ ಲವಣ ಪ್ರೀತಿ ಅರ್ಥವಾಗುತ್ತದೆ.
ಉಪ್ಪಿಗೂ ಗಣಪತಿಗೂ ಇರುವ ನಂಟು ಏನು? :
ದೇವಸ್ಥಾನದಿಂದ ಉತ್ತರಕ್ಕೆ ಸುಮಾರು ನೂರು ಮೀಟರ್ ಅಂತರದಲ್ಲಿ ರಾಜಕಾಲುವೆ ಇದ್ದು ಇದು ಅಘನಾಶಿನಿ ನದಿಯನ್ನು ಸಂಪರ್ಕಿಸುತ್ತದೆ. ಹಿಂದೆ ಸಾಣಿಕಟ್ಟಾ ದಿಂದ ಉಪ್ಪನ್ನು ತುಂಬಿಸಿಕೊಂಡು ಸಮುದ್ರ ಮಾರ್ಗವಾಗಿ ಬಂದ ಮಚವೆಗಳು ಈ ರಾಜಕಾಲುವೆ ಮೂಲಕ ಕುಮಟಾ ಪಟ್ಟಣಕ್ಕೆ ಉಪ್ಪನ್ನು ಪೂರೈಸುತ್ತಿದ್ದವು.
. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಬೇರೆ ಬೇರೆ ಊರುಗಳಿಗೆ ಸಾಗಿಸಲ್ಪಡುತ್ತಿದ್ದವು. ಒಮ್ಮೆ ದೇವಸ್ಥಾನದ ಅನತಿ ದೂರದಲ್ಲಿ ಹಾಕಿಟ್ಟ ಉಪ್ಪಿನ ರಾಶಿಯಲ್ಲಿ ಗಣಪತಿ ದೇವರ ಮೂರ್ತಿ ಸಿಕ್ಕಿತು. ಅದೇ ಮೂರ್ತಿ ಈಗಿನ ಸ್ಥಳದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿತು. ಉಪ್ಪಿನ ರಾಶಿಯಲ್ಲಿ ಸಿಕ್ಕಿದ್ದರಿಂದ ಉಪ್ಪಿನ ಗಣಪತಿ ಎಂದು ಹೆಸರಾಯಿತು ಎಂಬ ಪ್ರತೀತಿ ಇದೆ.
ಈ ದೇವಸ್ಥಾನದಲ್ಲಿ ಬಲಮುರಿ ಗಣಪತಿ ಮೂರ್ತಿಯಲ್ಲದೆ ಶಿವಸ್ವರೂಪಿ ವಿಘ್ನೇಶ್ವರ ಮತ್ತು ಪಾರ್ವತಿ ಸ್ವರೂಪಿ ದುರ್ಗಾಂಬಿಕೆ ಗುಡಿಗಳೂ ಇವೆ.