
ಕಾರವಾರ: ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ವರ್ಷದ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಬೆಳೆಯನ್ನೇ ನಂಬಿಕೊಂಡಿದ್ದ ರೈತ ಕಂಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ಜೂನ 7ರಂದು ಮುಂಗಾರು ಪ್ರವೇಶವಾಗಿ ಸೆಪ್ಟೆಂಬರ್ ಅಂತ್ಯದವರೆಗೆ ಸರಾಸರಿ 300 ರಿಂದ 400 ಸೆಂಟಿಮೀಟರ್ ಮಳೆ ಆಗುತ್ತಿತ್ತು. ಈ ವರ್ಷ ಜೂನ್ ಕೊನೆಯ ವಾರದಲ್ಲಿ ಮುಂಗಾರು ಪ್ರವೇಶ ಆಗಿ ಜುಲೈ ಮೊದಲೆರಡು ವಾರದಲ್ಲಿ ಅಬ್ಬರದ ಮಳೆ ಸುರಿದು ಕ್ರಮೇಣ ಕ್ಷೀಣಿಸಿ ಆಗಸ್ಟ್ ತಿಂಗಳ ಎರಡು ವಾರಗಳ ಅಂತ್ಯದವರೆಗೂ ಸಂಪೂರ್ಣ ಮಾಯವಾಗಿದ್ದು ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ.
ಮಾನ್ಸೂನ್ ಮಾರುತದ ಮಳೆಯನ್ನೇ ನಂಬಿಕೊಂಡಿರುವ ಕರಾವಳಿ ಭಾಗದ ರೈತರು ಭತ್ತದ ನಾಟಿ ಮಾಡಿ ನೀರಿಲ್ಲದೆ ಗದ್ದೆಗಳು ಒಣಗುವ ಪರಿಸ್ಥಿತಿ ಕಾಣುತ್ತಿದೆ ಇದರಿಂದ ಈ ಬೆಳೆಯನ್ನೇ ನಂಬಿಕೊಂಡಿರುವ ರೈತ ಕಂಗಾಲಾಗಿ ಮುಗಿಲ ಕಡೆ ಮುಖ ಮಾಡಿ ಮಳೆಗಾಗಿ ಕಾಯುತ್ತಿರುವುದು ಕರಾವಳಿ ಭಾಗದಲ್ಲಿ ಅಚ್ಚರಿಯಾದರೂ ಸತ್ಯದ ಘಟನೆಯಾಗಿದೆ. ಹಿಂದೆಲ್ಲಾ ಮಳೆಗಾಲದಲ್ಲಿ ಪುಷ್ಯ, ಪುನರ್ವಸು, ಆರಿದ್ರ, ಆಶ್ಲೇಷ ಮಳೆ ನಕ್ಷತ್ರಗಳು ಬಿಟ್ಟೂ ಬಿಡದೆ ಸುರಿಯುತ್ತಿತ್ತು, ಆದರೆ ಈಗ ಮಳೆಗಾಲದಲ್ಲಿ ಬೇಸಿಗೆ ವಾತಾವರಣ ಅನುಭವಿಸುವ ಪರಿಸ್ಥಿತಿ ಕರಾವಳಿ ಭಾಗದಲ್ಲಿ ನಿರ್ಮಾಣವಾಗಿದ್ದು ಇದೇ ಮೊದಲು ಎನ್ನುತ್ತಾರೆ ಎಂಬತ್ತು ವರ್ಷದ ಪ್ರಗತಿಪರ ರೈತ ಅಂಕೋಲಾದ ನಾಗಪ್ಪ ಗೌಡರು.
ಈ ಕುರಿತು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲಾಗಿ ಈ ವರ್ಷ ಸೈಕ್ಲೋನ್ ಕಾರಣಕ್ಕೆ ಮಳೆ ದೂರವಾಗಿದ್ದು ನಿಜ. ಆದರೆ ಈ ತಿಂಗಳ ಕೊನೆಯ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಯಂತೆ ಮಳೆಯಾಗುವ ನಿರೀಕ್ಷೆಗಳು ಇವೆ ಎನ್ನುತ್ತಾರೆ. ಏನೇ ಆದರೂ ಭತ್ತದ ಸಸಿಗಳು ಸುಟ್ಟುಹೋದ ಮೇಲೆ ಮತ್ತೆ ಚಿಗುರಲು ಸಾಧ್ಯವಿಲ್ಲ. ಈ ಕುರಿತು ಅಧಿಕಾರಿಗಳು ಬೆಳೆ ನಷ್ಟದ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ರೈತ ಒಕ್ಕೂಟದ ಕೂಗು.