ಕುಮಟಾ : ಉತ್ತರ ಕನ್ನಡ ಜಿಲ್ಲೆಯಲ್ಲಿ ಬಸ್ ನಿಲ್ದಾಣಕ್ಕೆ ಅತೀ ಹತ್ತಿರದಲ್ಲಿರುವ ರೇಲ್ವೆಸ್ಟೇಶನ್ ಎಂದರೆ ಕುಮಟಾ ಸ್ಟೇಶನ್. ಕೇವಲ 100 ಮೀಟರ್ ಅಂತರದಲ್ಲಿರುವ ಸ್ಟೇಶನ್ ಗೆ ಆಟೋ, ಕಾರುಗಳಲ್ಲಿ ಹೋಗುವವರಿಗಿಂತ ಪಾದಚಾರಿಗಳ ಸಂಖ್ಯೆಯೇ ಅಧಿಕ.
ಅದಲ್ಲದೆ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿಗೆ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿಯೇ ಸಾಗುತ್ತಾರೆ. ಇಷ್ಟೆಲ್ಲಾ ಅನುಕೂಲವಿದ್ದರೂ ಈ ಮಾರ್ಗದಲ್ಲಿ ಸಾಗುವಾಗ ಮೂಗು ಮುಚ್ಚಿಯೇ ಸಾಗಬೇಕು ಇಲ್ಲದಿದ್ದರೆ ವಾಕರಿಕೆ ಗ್ಯಾರಂಟಿ. ಬೇಕಿದ್ದರೆ ನೀವೂ ಪರೀಕ್ಷೀಸಬಹುದು. ರಾಷ್ಟ್ರೀಯ ಹೆದ್ದಾರಿಯಿಂದ ರೇಲ್ವೆ ರಸ್ತೆಗೆ ಸಾಗುತ್ತಿದ್ದಂತೆ ಎಡಗಡೆ ಪ್ಲಾಸ್ಟಿಕ್ ಕಸದ ರಾಶಿ ಸ್ವಾಗತಿಸುತ್ತದೆ. ಇದರಲ್ಲಿ ಹಸಿಕಸದ ತ್ಯಾಜ್ಯಗಳೂ ಸೇರಿರುತ್ತವೆ. ಇದರಿಂದ ಹಂದಿಗಳು, ನಾಯಿಗಳು ಹಾಗೂ ದನಕರುಗಳು ಇವನ್ನು ತಿನ್ನಲು ಪೈಪೋಟಿಗೆ ಬಿದ್ದು ಕೆಲವೊಮ್ಮೆ ಆಹಾರಕ್ಕಾಗಿ ಅವುಗಳ ನಡುವೆ ಕಿತ್ತಾಟವಾಗಿ ರಸ್ತೆಮೇಲೆ ಬಂದು ಪ್ರಯಾಣಿಕರನ್ನು ಗಾಬರಿ ಪಡುವ ಸನ್ನಿವೇಶ ಉಂಟಾಗುತ್ತದೆ.
ತ್ಯಾಜ್ಯದೊಂದಿಗೆ ಪ್ಲಾಸ್ಟಿಕ್ ಕೂಡ ಈ ಪ್ರಾಣಿಗಳ ಹೊಟ್ಟೆಗೆ ಸೇರುವುದರಿಂದ ಅವುಗಳ ಆರೋಗ್ಯ ಏನಾಗುವುದು ಎಂಬುದನ್ನು ಊಹಿಸಲೂ ಅಸಾಧ್ಯ.
ಇನ್ನು ಮನುಷ್ಯರ ಪಾಡು ಅದೋಗತಿ. ಮುಂಜಾನೆ ಶುದ್ದಗಾಳಿ ಸೇವಿಸಲು ಈ ಮಾರ್ಗದಲ್ಲಿ ವಾಕಿಂಗ್ ಗೆ ಬರುವ ಅದೆಷ್ಟೋ ಜನ ಇಂದು ಮಾರ್ಗ ಬದಲಾಯಿಸಿದ್ದಾರೆ. ಕಾರಣ ಎಡಗಡೆ ಕಸದ ರಾಶಿಯ ಗಬ್ಬುವಾಸನೆ ಹಾಗೇ ಸ್ವಲ್ಪ ಮುಂದೆ ಸಾಗಿದರೆ ಬಲಗಡೆಯಿಂದ ಕೊಳಚೆ ನೀರಿನ ಘಾಟು. ರೇಲ್ವೆ ಪ್ರಯಾಣದ ಪ್ರಯಾಣಿಕರು, ವಿದ್ಯಾರ್ಥಿಗಳು ಈ ದಾರಿ ಕ್ರಮಿಸುವಾಗ ಮೂಗು ಹಿಡಿದು ಸಾಗುವುದು ಸಾಮಾನ್ಯ ದೃಶ್ಯ.
ಕೇವಲ ಆದಾಯಕ್ಕಷ್ಟೇ ರಸ್ತೆ ಅನುಭೋಗಿಸುವ ಕೊಂಕಣ ರೇಲ್ವೆ ಇಲಾಖೆಯ ಜವಾಬ್ದಾರಿ ಕೂಡ ಇದೆ ಎಂಬುದನ್ನು ಇಲಾಖೆ ಮರೆಯಬಾರದು. ಈ ರಸ್ತೆ ಮತ್ತು ನೀರು ನಿಂತಿರುವ ಜಾಗ ರೇಲ್ವೆ ಇಲಾಖೆಯ ಸ್ವಾಧೀನದಲ್ಲಿದೆ. ಅಂದಮೇಲೆ ರೇಲ್ವೆ ಅಧಿಕಾರಿಗಳು ತಮಗೆ ಸಂಬಂಧಿಸಿಲ್ಲ ಎಂದು ಸುಮ್ಮನಿದ್ದರೆ ಸಮಸ್ಯೆಗೆ ಪರಿಹಾರವಾಗಲಾರದು.ಇದರ ಜೊತೆಗೆ ಸಂಬಂಧ ಪಟ್ಟ ಇಲಾಖೆ ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸಿದರೆ ಹಿಂದಿನ ಅವಧಿಯಲ್ಲಿ ಸ್ವಚ್ಚ ಪುರಷ್ಕಾರ ಪ್ರಶಸ್ತಿಯ ಗರಿಗೆ ಒಂದಿಷ್ಟು ಗೌರವ ಕೊಟ್ಟಂತಾದರೂ ಆಗಬಹುದು.ಅದೇರೀತಿ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.