ಕಾರವಾರ : ಕರಾವಳೀಯಲ್ಲಿ ಎಡೆಬಿಡದೆ ಸುರಿದ ಭಾರೀ ಮಳೆ ಈ ವರ್ಷದ ಮಳೆಗಾಲ ಅಕ್ಷರಶಃ ವರ್ಷಧಾರೆಯಾಗಿತ್ತು. ಶಿರೂರು ಗುಡ್ಡ ಕುಸಿತ ಕರಾವಳಿಯೆಂದರೆ ಭಯಭೀತಗೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಶ್ರಾವಣ ಮಾಸವನ್ನೂ ಮಳೆ ನುಂಗಿ ಹಾಕಿದ್ದು ಈ ವರ್ಷದ ವರಮಹಾಲಕ್ಷ್ಮೀ ವೃತ ಮಹಿಳೆಯರ ಓಡಾಟಕ್ಕೂ ತಡೆಯೊಡ್ಡಿತ್ತು.
ಈ ಮಳೆ ಮುಗಿದರೆ ಸಾಕಾಪ್ಪಾ ಅಂತಾ ಹಿಡಿ ಶಾಪ ಹಾಕಿದವರೂ ಇದ್ದಾರೆ. ಕರಾವಳಿಯ ರೆಡ್ ಅಲರ್ಟ ಶಾಲೆ ಕಾಲೇಜುಗಳನ್ನು ಮುಚ್ಚಿಸಿತ್ತಾದರೂ ಆ ರಜೆ ಮಕ್ಕಳಿಗೆ ಸಜೆಯಾಗಿ ಮಾರ್ಪಾಡಾಗಿತ್ತು. ಇಷ್ಟೆಲ್ಲಾ ಅವಗಢಗಳು ಕಳೆದು ಗಣೇಶ ಹಬ್ಬ ಬಂದಿದ್ದು ಮಳೆ ಕೂಡ ಒಂದಿಷ್ಟು ದೂರ ಸರಿದಿದ್ದು ನೆಮ್ಮದಿಯ ಉಸಿರು ಬಿಡುವಂತೆ ಮಾಡಿತ್ತು.
ಜಿಲ್ಲೆಯಾದ್ಯಂತ ಸಡಗರದಿಂದಲೇ ಗೌರಿ ಹಬ್ಬ ಆಚರಣೆ ನಡೆದು ಗಣೇಶ ಚತುರ್ಥಿಯಂದು ಮೂರ್ತಿ ತಂದು ಪೂಜೆ ಕಂಕರ್ಯ ಕೂಡ ನೆರವೇರಿತ್ತು. ಈ ಸಂಭ್ರಮ ಹೆಚ್ಚು ಕಾಲ ಉಳಿಯಲೇ ಇಲ್ಲಾ. ಸಂಭ್ರಮದ ನಡುವೆ ಸೂತಕ ಬಂದು ಹಬ್ಬವನ್ನು ಮಂಕಾಗಿಸಿತ್ತು. ಇದಕ್ಕೆ ಕಾರಣವಾದುದು ಜಿಲ್ಲೆಯ ಕೇಂದ್ರಬಿಂದು ಕಾರವಾರದಲ್ಲಿ ನಡೆದ ಕೊಲೆ ದುರಂತ.
ಹಬ್ಬವನ್ನು ಆಚರಿಸಿಲು ವಾರದಿಂದಲೇ ಸಿದ್ದತೆ ನಡೆಸಿ ಮನೆಯನ್ನು ಅಲಂಕರಿಸಿ ಮುಂಜಾನೆಯೇ ಗಣೇಶ ಮೂರ್ತಿಯನ್ನು ತಂದು ವಿವಿಧ ಹೂಗಳಿಂದ ಸಿಂಗರಿಸಿ ಚಕ್ಕುಲಿ, ಲಡ್ಡು, ಎಳ್ಳುಂಡೆ, ಮೋದಕ ಹೀಗೆ ಬಗೆ ಬಗೆಯ ಇಪ್ಪತ್ತೊಂದು ರೀತಿಯ ಕಜ್ಜಾಯದ ನೈವೇದ್ಯ ಮಾಡಿ ಪೂಜೆಯನ್ನೂ ಕುಟುಂಬದವರೆಲ್ಲರೂ ಸೇರಿ ನೆರವೇರಿಸಿದ್ದರು. ಆದರೆ ಆ ಮನೆಗೆ ಪೂಜಾಫಲ ಮಾತ್ರ ಆಗಲೇ ಇಲ್ಲವೆಂಬಂತೆ ತೋರುತ್ತದೆ. ವಿಘ್ನನಿವಾರಕರ ಪೂಜೆಗೆಮಾಡಿದ ಖರ್ಚು ಕುಟುಂಬದಲ್ಲಿ ಅಶಾಂತಿಯನ್ನು ಹುಟ್ಟುಹಾಕಿತು. ಆರತಿಯ ದೀಪ ನಂದುವ ಪೂರ್ವದಲ್ಲೇ ಜಗಳ ಪ್ರಾರಂಭವಾಗಿ ಅದು ಕೊಲೆಯಲ್ಲಿ ಪರ್ಯಾವಸಾನ ಗೊಂಡಿತು.
ಅದೊಂದು ಕ್ಷುಲ್ಲಕ ಖರ್ಚಿನ ಲೆಕ್ಕ. ಗಣೇಶ ಚತುರ್ಥಿಯ ಆಚರಣೆ ವೇಳೆ ಹಬ್ಬಕ್ಕೆ ಖರ್ಚು ಮಾಡಿದ ಹಣದ ಲೆಕ್ಕದ ವಿಷಯಕ್ಕೆ ಸಹೋದರರ ನಡುವೆ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದಲ್ಲಿ ನಡೆದಿದೆ. ಮನೆಯಲ್ಲಿ ಗಣೇಶನನ್ನು ಕೂರಿಸಲಾಗಿದ್ದು, ಈ ವೇಳೆ ಹಣದ ಲೆಕ್ಕದ ವಿವರ ಕೊಡಲಿಲ್ಲವೆಂದು ಗಲಾಟೆ ಆರಂಭವಾಗಿದೆ. ಕೊನೆಗೆ ಪ್ರಭಾಕರ್ ಅವರ ಸಹೋದರಿಯ ಮಕ್ಕಳು ಸಂದೇಶ ಎಂಬುವವನಿಗೆ ಚಾಕುವಿನಿಂದ ಇರಿದಿದ್ದು, ಗಲಾಟೆ ಸಾವಿನಲ್ಲಿ ಅಂತ್ಯಕoಡಿದೆ.
ನಗರದ ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ದುರ್ಘಟನೆ ನಡೆದಿದ್ದು, ಸಂದೇಶ ಪ್ರಭಾಕರ ಬೋರ್ಕರ್ ಕೊಲೆಯಾದ ದುರ್ದೈವಿ. ಸಂದೇಶ್‌ನ ಚಿಕ್ಕಪ್ಪನ ಮಗ ಮನೀಶ್ ಬೋರ್ಕರ್ ಚಾಕು ಇರಿದ ವ್ಯಕ್ತಿ ಎಂದು ತಿಳಿದುಬಂದಿದೆ. ಬೋರ್ಕರ್ ಕುಟುಂಬಸ್ಥರು ಪ್ರತಿವರ್ಷ ಗಣೇಶ ಚತುರ್ಥಿಯಂದು ಮನೆಯಲ್ಲಿ ಗಣಪತಿ ಮೂರ್ತಿ ಸ್ಥಾಪಿಸಿ ಪೂಜೆ ಸಲ್ಲಿಸುತ್ತಿದ್ದರು. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿತ್ತು.
ಸಂಪ್ರದಾಯದoತೆ ಈ ವರ್ಷದ ಗಣೇಶ ಚತುರ್ಥಿಯಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಗಣಪತಿ ಪೂಜೆ ನಂತರ ಪ್ರಭಾಕರ ಹಾಗೂ ಮನೋಹರ ಬೋರ್ಕರ್ ನಡುವೆ ಕಳೆದ ವರ್ಷ ಹಬ್ಬಕ್ಕೆ ಖರ್ಚು ಮಾಡಿದ ಹಣದ ಲೆಕ್ಕಾಚಾರದ ಕುರಿತು ಗಲಾಟೆ ನಡೆದಿದೆ ಎನ್ನಲಾಗಿದೆ. ಎರಡೂ ಕುಟುಂಬಸ್ಥರ ಮಕ್ಕಳು ಹೊಡೆದಾಡಿಕೊಂಡಿದ್ದು, ಈ ವೇಳೆ ಪ್ರಭಾಕರ್ ಹಿರಿಯ ಮಗ ಸಂದೇಶ್‌ಗೆ ಮನೋಹರ್ ಅವರ ಕಿರಿಯ ಪುತ್ರ ಚಾಕು ಇರಿದಿದ್ದಾನೆ.
ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಚಾಕು ಇರಿದ ಮನೀಶ್ ಹಾಗೂ ಆತನಿಗೆ ಸಹಕಾರ ನೀಡಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.