ಜೀವನದಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಲು ನಮ್ಮ ಛಲ, ಹಠದ ಜೊತೆಗೆ ಸರಿಯಾದ ಮಾರ್ಗದರ್ಶನ ಮಾಡುವ ಗುರು ನಮ್ಮ ಜೊತೆಗಿರಬೇಕು. ಗುರಿ ಮುಂದೆ ಗುರು ನಮ್ಮ ಹಿಂದೆ ಇದ್ದಾಗ ಮಾತ್ರ ಅದರಲ್ಲಿ ಯಶಸ್ಸು ಸಾಧಿಸ ಬಹುದು ಎನ್ನುವುದು ಪ್ರಾಜ್ಞರ ಅನುಭವ ವಾಣಿ.
ಭಗವಂತನ ಅವತಾರ ವೆತ್ತಿದ್ದ ವಿಷ್ಣು ಪರಮಾತ್ಮ ಕೂಡ ರಾಮನಾಗಿದ್ದಾಗ ವಿಶ್ವಾಮಿತ್ರರಲ್ಲಿ, ಕೃಷ್ಣರಾಗಿದಾಗ ಸಾಂಧೀಪನಿ ಮುನಿಯ ಶಿಷ್ಯರಾಗಿ ವಿದ್ಯಾರ್ಜನೆ ಮಾಡಿರುವುದು ಗುರುವಿನ ಮಹತ್ವ ತಿಳಿಸುತ್ತದೆ. ಹಾಗಾಗಿಯೇ ದಾಸರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹೇಳಿರುವುದು. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗಿಂತ ಗುರುವಿನ ಸ್ಥಾನವೇ ಹಿರಿದಾದುದು.
ಆಧುನಿಕ ಕಾಲಘಟ್ಟದಲ್ಲೂ ಗುರುಪರಂಪರೆ ಮುಂದುವರೆದುಕೊಂಡು ಬಂದಿರುವುದು ಗುರುವಿನ ಮಹತ್ವ ಸಾಧರ ಪಡಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಗುರುವಿನ ಸ್ಥಾನದಲ್ಲಿ ಲಕ್ಷಾಂತರ ಶಿಕ್ಷಕರು ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೆಲ್ಲರನ್ನೂ ಗೌರವಿಸುವ ದಿನವೇ ಶಿಕ್ಷಕರ ದಿನಾಚರಣೆಯಾಗಿದೆ.
ಇದು ಮಹಾನ್ ಶಿಕ್ಷಣ ತಜ್ಞ, ಭಾರತದ ಪ್ರಥಮ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ. ಅವರ ಸಲಹೆ ಮೇರೆಗೆ ಅವರ ಹುಟ್ಟುಹಬ್ಬ ಆಚರಿಸುವ ಸಂಪ್ರದಾಯ ಶಿಕ್ಷಕ ದಿನಾಚರಣೆ.