ಗೋಕರ್ಣ ಭಾಗದ   ತುಳಸಿ ಪೂಜೆಗೆ ಹಾಲಕ್ಕಿಗರ ವಿಶೇಷ ಮೆರಗು :
Art & Culture Articles Karnataka Uttara Kannada

ಗೋಕರ್ಣ ಭಾಗದ   ತುಳಸಿ ಪೂಜೆಗೆ ಹಾಲಕ್ಕಿಗರ ವಿಶೇಷ ಮೆರಗು :

ಗೋಕರ್ಣ : ಕಾರ್ತಿಕ ಮಾಸದಲ್ಲಿ ಆಚರಿಸುವ  ತುಳಸಿ ಪೂಜೆ ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಒಂದು. ಸಾಮಾನ್ಯವಾಗಿ ತುಳಸಿ ಹಬ್ಬ ಒಂದು ದಿನಕ್ಕೆ ಸೀಮಿತವಾಗಿರುವುದು. ಆದರೆ ಗೋಕರ್ಣ ಭಾಗದ ಹಾಲಕ್ಕಿ ಸಮಾಜದಲ್ಲಿ ಮೂರು ದಿನಗಳ ಕಾಲ ತುಳಸಿ ಮದುವೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಸಂಪ್ರದಾಯಬದ್ದವಾಗಿ ಆಚರಿಸುವುದು ವಿಶೇಷ.ದ್ವಾದಶಿಯಂದು ಮುಂಜಾನೆಯಿಂದಲೇ ಪೂಜೆಯ ಸಿದ್ದತೆ, ತುಳಸಿ ಕಟ್ಟೆ ಸುತ್ತಲೂ ಸಗಣಿಯಿಂದ ಸಾರಿಸಿ, ಹಲಿಯ ರಂಗವಲ್ಲಿ ಹಾಕಿ ಮಹಿಳೆಯರು ಆರಂಭಿಕ ಸಿದ್ದತೆ ಮಾಡಿದರೆ ಮಧ್ಯಾಹ್ನದಿಂದ ಪುರುಷರು ಕಬ್ಬು, ಗೊಂಡೆ ಹೂವಿನ ಮಾಲೆಗಳಿಂದ ಸಿಂಗರಿಸುತ್ತಾರೆ.  ಮಾಲತಿ ಹೂವು ಎಂಬ ಕಾಡಿನ ಹೂವು ತುಳಸಿ ಹಬ್ಬದ ವಿಶೇಷ ಅಲಂಕಾರ. ಇದು ಕಾಡಿನಲ್ಲಿ ಸಿಗುವ ಮಾಲತಿ ಹೂ ಎಂಬ ಬೆಟ್ಟದ ಹೂ. ತುಳಸಿ ಪೂಜೆ ಯಂದು ಕಡ್ಡಾಯವಾಗಿ ಹಾಕಲೇ ಬೇಕೆಂಬುದು ಈ ಭಾಗದ ಬುಡಕಟ್ಟು ಸಂಸ್ಕೃತಿ ಹೊಂದಿರುವ ಹಾಲಕ್ಕಿ ಜನರ ನಂಬಿಕೆ ಎಂದು ಸುಮಾರು 70 ವರ್ಷದ ನಾಗಪ್ಪ ಗೌಡ ಅವರು ಅಭಿಪ್ರಾಯ ಪಡುತ್ತಾರೆ. 

ಆಧುನಿಕತೆಯ ಪ್ರಭಾವದಿಂದ ಲೈಟಿಂಗ್, ಮೇಣದ ಬತ್ತಿ ಬಗೆ ಬಗೆಯ ಪಟಾಕಿಗಳನ್ನು ಸಿಡಿಸುವುದು ಈ ಜನಾಂಗದಲ್ಲೂ ರೂಢಿಗತವಾಗಿದೆ. ಮದುವೆ ಗೃಹ ಪ್ರವೇಶ ದಂತಹ ಕಾರ್ಯಕ್ರಮಗಳಿಗೆ ಪುರೋಹಿತರನ್ನು ಕರೆಸುವ ರೂಢಿ ಇದ್ದರೂ ತುಳಸಿ ಪೂಜೆಯನ್ನು ಯಾವುದೇ ಅರ್ಚಕರನ್ನು ಕರೆಸದೇ  ಸ್ವತಹ ಇವರೇ ನೆರವೇರಿಸುತ್ತಾರೆ.ಮೂರು ಹಂತದಲ್ಲಿ ಪೂಜೆ ನೆರವೇರದಿ ಬಳಿಕ ಮೂರು ಬಾರಿ ಗೋಯ್ದ, ಗೋಯ್ದ, ಗೋಯ್ದ ಎಂದು ಎಲ್ಲರೂ ಒಕ್ಕೊರಲಿನಿಂದ ಜೋರಾಗಿ ಹೇಳುತ್ತಾರೆ. ( ತಿರುಪತಿ ತಿಮ್ಮಪ್ಪ ಗೋವಿಂದ ಈ ಜನಾಂಗದ ಆರಾಧ್ಯ ದೈವ. ಗೋವಿಂದ ಎನ್ನುವುದನ್ನೇ ಗೋಯ್ದ ಎಂದು ಸಂಭೋಧಿಸುವುದು ಇವರ ರೂಢಿ. )    ನಂತರ  ಒಂದು ಸುತ್ತು ಹಾಕಿ ಪುನಃ ಮತ್ತೆದೇವರ ಮುಂದೆ ಬಂದು  ಗೋಯ್ದ,ಗೋಯ್ದ, ಗೋಯ್ದ ಎಂದು ಹೇಳಿ ಮತ್ತೆ ತುಳಸಿ ಕಟ್ಟೆ ಪ್ರದಕ್ಷಿಣೆ ಹಾಕಿ ಮೂರನೇ ಬಾರಿ ಗೋಯ್ದ, ಗೋಯ್ದ, ಗೋಯ್ದ ಹೇಳಿ ಕೈ ಮುಗಿಯುತ್ತಾರೆ. ಇಲ್ಲಿಗೆ ಮೊದಲ ದಿನ ಪೂಜೆ ಮುಕ್ತಾಯವಾಗುತ್ತದೆ.

 ಪ್ರಸಾದದ ವಿಶೇಷತೆ; 

ಗಡ್ಡೆ ಗೆಣಸುಗಳನ್ನು (ಕೆನ್ನಿ ಗೆಂಡೆ, ಗೊಣ್ಣೆ ಗೆಂಡೆ) ಬೇಯಿಸಿ ಅದಕ್ಕೆ ಚರು ( ಅನ್ನ) ಮಿಶ್ರಣ ಮಾಡಿ ತಯಾರಿಸುತ್ತಾರೆ. ಇದು  ಹಾಲಕ್ಕಿ ಸಮುದಾಯದ  ಮೂಲನಿವಾಸಿತನ ಮತ್ತು ಕಾಡಿನ   ಸಂಬಂಧವನ್ನು ತಿಳಿಸುತ್ತದೆ ಎಂದು ಸಂಶೋಧಕ  ಎಂ. ಚಲವಾದಿ ಯವರ ಅಭಿಪ್ರಾಯ ಪಡುತ್ತಾರೆ.

ಪೂಜೆಯ  ಬಳಿಕ ಬೆಲ್ಲದ ಪಾಯಸಿದ ಊಟ ನಂತರ ಜಾನಪದ ಕಲೆಯಾದ ಗುಮಟೆ ಪಾಂಗ್‌  ಪ್ರದರ್ಶನ ಇರುತ್ತದೆ. ರಾತ್ರಿ ಪ್ರಾರಂಭವಾಗಿ ಮುಂಜಾನೆ ತನಕವೂ ಗುಮಟೆ ಸದ್ದಿನ  ಹಿನ್ನೆಲೆ ಜನಪದ ಹಾಡು ರಿಂಗಣಿಸುತ್ತದೆ. ರಾತ್ರಿ ಊರಿನ ಇನ್ನಿತರ ತುಳಸಿ ಕಟ್ಟೆಗೆ ಗುಂಪು ಗುಂಪಾಗಿ ಬಂದು ಗೋಯ್ದ, ಗೋಯ್ದ, ಗೋಯ್ದ ಎಂದು ಜೋರಾಗಿ ಭಕ್ತಿಯಿಂದ ಕೂಗಿ ತಮ್ಮ ಭಕ್ತಿ ಪ್ರದರ್ಶನ ಮಾಡುತ್ತಾರೆ. 

ಎರಡು ಮತ್ತು ಮೂರನೇ ದಿನ ಮರುಗೋಯ್ದ ಎಂದು ಕರೆಯುವ ಆಚರಣೆ ಇದೆ. ರಾತ್ರಿ ಪಟಾಕಿ ಸಿಡಿಸಿ ಪೂಜೆ ಮಾಡುತ್ತಾರೆ. ಅಂದು ವಿಶೇಷ ಅಡುಗೆ ಇರೋದಿಲ್ಲ. ಅದೇ ರೀತಿ ಬೇರೆಯವರ ತುಳಸಿ ಕಟ್ಟೆಗೆ ಹೋಗಿ ಗೋಯ್ದ  ಕರೆಯುವ ಪದ್ಧತಿಯಾಗಲಿ ಗುಮಟೆ ಬಾರಿಸುವ ಪದ್ದತಿಯಾಗಲಿ ಇರುವುದಿಲ್ಲ. ಮೂರನೇ ದಿನ ತುಳಸಿ ಕಟ್ಟೆಯ ಎಲ್ಲಾ ಅಲಂಕಾರವನ್ನು ತೆಗೆದು ಶುದ್ಧ ಮಾಡಿ ರಾತ್ರಿ ಹೂವಿನ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ. ಪ್ರಸಾದಕ್ಕೆ ಬೆಲ್ಲ ಹಾಕಿದ ಕಾಯಿ ಹಾಲು, ದೋಸೆ ನೀಡುತ್ತಾರೆ. ಇಲ್ಲಿಗೆ ತುಳಸಿ ಹಬ್ಬ ಮುಕ್ತಾಯ ಇದು ಹಾಲಕ್ಕಿ ಸಮಾಜದ ಸಾಂಸ್ಕೃತಿಕ ಕುರುಹು ಗಳಲ್ಲಿ ಒಂದಾಗಿದೆ. 

ತುಳಸಿ ಪೂಜೆಯ ಪೌರಾಣಿಕ ಹಿನ್ನೆಲೆ ;

ತುಳಸಿ ವಿವಾಹ ದ ಹಾರ್ದಿಕ ಶುಭಾಶಯಗಳು.       ಈ ಹಬ್ಬವನ್ನು ದೇವೋತ್ಥಾನ ಏಕಾದಶಿಯ ಮರುದಿನ ಅಂದರೆ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ಯಂದು ಆಚರಿಸಲಾಗುತ್ತದೆ.  ಹಿಂದೂ ಧರ್ಮದಲ್ಲಿ ತುಳಸಿ ವಿವಾಹದ ಮಹತ್ವ— 

ಪೌರಾಣಿಕ ಕಥೆಯ ಪ್ರಕಾರ, ಒಂದು ಕಾಲದಲ್ಲಿ ಜಲಂಧರನೆಂಬ ರಾಕ್ಷಸ ರಾಜ್ಯದ ಮೂರು ಲೋಕಗಳಲ್ಲಿ ಭಯವನ್ನು ಸೃಷ್ಟಿಸಿದ್ದನು. ಅವನ ಪತ್ನಿ ವಿಷ್ಣುವಿನ ಮಹಾನ್ ಭಕ್ತೆ ಮತ್ತು ನಿಷ್ಠಾವಂತ ಮಹಿಳೆ. ಪತಿಯ ಮೇಲಿನ ಭಕ್ತಿ ಮತ್ತು ತಪಸ್ಸಿನಿಂದ ಆಕೆಗೆ ಜಲಂಧರನನ್ನು ಸೋಲಿಸುವುದು ಅಸಾಧ್ಯವಾಗಿತ್ತು.ಆದರೆ ವಿಷ್ಣುವು ಜಲಂಧರನ ರೂಪವನ್ನು ತೆಗೆದುಕೊಂಡು ವೃಂದಾಳ ಪತಿ ಮೇಲಿನ ಭಕ್ತಿಯನ್ನು ಮುರಿದನು. ಅಲ್ಲದೆ ವಿಷ್ಣು ಜಲಂಧರನನ್ನು ಕೊಂದನು. ಇದರಿಂದ ಕೋಪಗೊಂಡ ವೃಂದಾ ಭಗವಾನ್ ವಿಷ್ಣುವನ್ನು ಕಲ್ಲಾಗುವಂತೆ ಶಪಿಸಿದಳು. ವಿಷ್ಣುವಿನ ಈ ರೂಪವನ್ನು ‘ಸಾಲಿಗ್ರಾಮ’ ಎಂದು ಕರೆಯಲಾಗುತ್ತದೆ.ನಂತರ ವೃಂದಾ ತನ್ನನ್ನು ತಾನೇ ಬೆಂಕಿ ಹಚ್ಚಿಕೊಂಡು ತನ್ನ ಜೀವನವನ್ನು ಕೊನೆಗೊಳಿಸಿದಳು. ವೃಂದಾ ತೀರಿಕೊಂಡ ಜಾಗದಲ್ಲಿ ತುಳಸಿ ಗಿಡ ಬೆಳೆಯತೊಡಗಿತು. ಭಗವಾನ್ ವಿಷ್ಣುವು ತುಳಸಿಯನ್ನು ತನ್ನ ಸಾಲಿಗ್ರಾಮ ರೂಪದೊಂದಿಗೆ ಮದುವೆಯಾಗುವುದಾಗಿಯೂ ಮತ್ತು ತುಳಸಿಯಿಲ್ಲದೆ ಅವನ ಪೂಜೆಯು ಅಪೂರ್ಣ ಆಗುವುದೆಂದು ವರವನ್ನು ನೀಡಿದನು. ಆದ್ದರಿಂದ ದೇವೋತ್ಥಾನ ಏಕಾದಶಿಯ ಮರುದಿನ ಸಾಲಿಗ್ರಾಮ ವೃಂದಾ ಅಂದರೆ ತುಳಸಿಯನ್ನು ಮದುವೆಯಾಗುತ್ತಾನೆ. ಈ ದಿನವನ್ನು ನೆನಪಿಸುವ ಗಳಿಗೆಯೇ  ತುಳಸಿ ಹಬ್ಬ ವಾಗಿದೆ.