ಉಡುಪಿ : ಒಂದೆಡೆ ದೀಪಾವಳಿ ಸಂಭ್ರಮ. ತಮ್ಮ ಆರ್ಥಿಕತೆ ಭದ್ರ ಬುನಾದಿಯಾದ ಬೋಟ್ ಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಮನೆಗಳಿಗೆ ತೆರಳಿ ಕುಟುಂಬದೊಂದಿಗೆ ಹಬ್ಬ ಆಚರಿಸಲು ತರಾತುರಿಯಲ್ಲಿದ್ದ ಮೀನುಗಾರರಿಗೆ ಅಲ್ಲಿ ಸಂಬಂವಿಸಿದ ಅಗ್ನಿದುರಂತ ಅವರ ಸಂಭ್ರಮ ಕಸಿದುಕೊಂಡಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ದೀಪಾವಳಿ ಪೂಜೆ ನಡೆಯುತ್ತಿದ್ದ ವೇಳೆ ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಏಂಟು ಮೀನುಗಾರಿಕಾ ಬೋಟ್ ಗಳು,ಎರಡು ಬೈಕ್‌ಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಬಲೆಗಳು ಸುಟ್ಟು ಭಸ್ಮವಾಗಿದ್ದು ಮೀನುಗಾರಿಕೆಯ ಸಂದರ್ಭದಲ್ಲಿ ಈ ದುರಂತ ಆಗಿರುವುದು ಮೀನುಗಾರರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ.
ಪಟಾಕಿ ಸಿಡಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ನಡೆಸಿತು.ಆಕಸ್ಮಿಕ ಬೆಂಕಿ ಅನಾಹುತದಿಂದ 5 ಕೋಟಿಗೂ ಅಧಿಕ ನಷ್ಟ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಲಂಗರು ಹಾಕಿದ್ದ ಬೋಟ್ ಗೆ ಬೆಂಕಿ ತಗುಲಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದ್ದು ಕುಂದಾಪುರ ಸಮೀಪದ
ಗಂಗೊಳ್ಳಿಯಲ್ಲಿ ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಬಂದ ಮೀನುಗಾರರು ಕಣ್ಣೀರು ಹಾಕಿದ್ದಾರೆ. ಅನ್ನ ನೀಡುತ್ತಿದ್ದ ಮೀನುಗಾರಿಕಾ ಬೋಟುಗಳು ಕಣ್ಣೆದುರಲ್ಲೇ ಸುಟ್ಟು ಕರಕಲಾಗಿವೆ. ಮರದಿಂದ ನಿರ್ಮಾಣ ಮಾಡಿದ ಬೋಟುಗಳು ಆಗಿರುವ ಕಾರಣಕ್ಕೆ ಬೆಂಕಿ ಒಮ್ಮೆಲೆ ಹೊತ್ತಿಕೊಂಡಿತ್ತು. ಆದರೆ ಘಟನೆಗೆ ಕಾರಣವೇನು ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಮೀನುಗಾರಿಕೆ ಹಾಗೂ ಬಂದರು ಸಚಿವರಾದ ಮಂಕಾಳು ವೈದ್ಯ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಬೋಟ ಕಳೆದುಕೊಂಡ ಮಾಲೀಕರಿಗೆ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜೊತೆಗಿದ್ದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಚಿವರು ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ವರದಿ ನೀಡಲು ಸೂಚನೆ ನೀಡಿದ್ದಾರೆ.
Leave feedback about this