ಪದ್ಮಶ್ರೀ ನಾಡೋಜ ಶ್ರೀಮತಿ ಸುಕ್ರಿ ಬೊಮ್ಮ ಗೌಡ
Art & Culture General News Karnataka Uttara Kannada

ಪದ್ಮಶ್ರೀ ನಾಡೋಜ ಶ್ರೀಮತಿ ಸುಕ್ರಿ ಬೊಮ್ಮ ಗೌಡ

ಜಾನಪದ ಕೋಗಿಲೆ ಎಂದೇ ಮನೆಮಾತಾಗಿರುವ ಸುಕ್ರಿ ಬೊಮ್ಮ ಗೌಡ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಡಗೇರಿಯವರು. ಆದಿವಾಸಿ ಬುಡಕಟ್ಟು ಸಂಸ್ಕೃತಿ ಹೊಂದಿರುವ ಹಾಲಕ್ಕಿ ಒಕ್ಕಲು ಜನಾಂಗದ ಸುಕ್ರಿ ಗೌಡರು ತಮ್ಮ ಮಾತಿನ ವೈಖರಿಯಿಂದ, ಹೋರಾಟದ ಬದುಕಿನಿಂದ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ ಎಂಬುದಕ್ಕೆ ಅವರು ಎಲ್ಲಿಯೇ ಹೋದರೂ ಅವರೊಂದಿಗೆ ಸೆಲ್ಪಿಗೆ ಮುಗಿಬೀಳುವ ಜನತೆಯ ಪ್ರತಿಕ್ರಿಯೆ ಸಾಕ್ಷ್ಯವನ್ನು ನೀಡುತ್ತದೆ.

ಕಡುಬಡತನದಲ್ಲೇ ಬೆಳೆದ ಸುಕ್ರಿ ಗೌಡರು ಅನಕ್ಷರಸ್ಥೆಯಾದರೂ ಸಾವಿರಾರು ಜನಪದ ಹಾಡುಗಳನ್ನು ನಿರರ್ಗಳವಾಗಿ ಹಾಡಬಲ್ಲರು ಈ ಹಾಡು ಕೇವಲ ಸಂತೋಷದ ಸಾಹಿತ್ಯವಾಗಿರದೇ, ನೋವು, ಹೋರಾಟದ ಕಿಚ್ಚು ಹಚ್ಚುವಂತಹದು. ತನ್ನ ಗಂಡ ಹಾಗೂ ಸಾಕು ಮಗ ಸಾರಾಯಿ ಕುಡಿದು ಸತ್ತಾಗ ದೃತಿಗೆಡದೇ ಮಧ್ಯಪಾನ ವಿರೋಧಿ ಚಳುವಳಿಯಲ್ಲಿ ಮಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದರು. ಯುವಜನತೆ ಸಾರಾಯಿಯಂತಹ ದುಶ್ಚಟಗಳಿಂದ ದೂರವಿದ್ದು ತಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕು. ಸಾರಾಯಿ ಹೆಂಡ್ರು ಮಕ್ಕಳನ್ನು ಬೀದಿಗೆ ಹಾಕಿ ಸಂಸಾರವನ್ನು ಹಾಳು ಮಾಡುತ್ತದೆ ಎಂಬ ಎಚ್ಚರಿಕೆಯ ಸಂದೇಶ ನೀಡಿ ಯುವಕರಲ್ಲಿ ಜಾಗೃತಿ ಮೂಡಿಸುವಲ್ಲಿ ಸಫಲರಾದರು. ಆದರೆ ಇತ್ತೀಚಿನ ಯುವಕರಲ್ಲಿ ಒಂದಿಷ್ಟು ಪಾಲು ಮತ್ತೆ ಮಧ್ಯಪಾನದ ದಾಸರಾಗಿರುವುದಕ್ಕೆ ಹಿರಿಯ ಜೀವ ನೊಂದುಕೊಳ್ಳುತ್ತಿದೆ.

ಸುಕ್ರಿ ಗೌಡರಿಗೆ ಕರ್ನಾಟಕ ಸರಕಾರ ಜಾನಪದ ಶ್ರೀ, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯ ಹಂಪಿ ನಾಡೋಜ ಪ್ರಶಸ್ತಿ, ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ಅರಣ್ಯ ಅತಿಕ್ರಮಣದಾರರ ಹೋರಾಟದಲ್ಲೂ ಮುಂಚೂಣಿಯಲ್ಲಿ ನಿಂತು ಅತಿಕ್ರಮಣದಾರರ ಹೋರಾಟಕ್ಕೆ ಹುರುಪು ನೀಡಿದ ಕೀರ್ತಿ ಅವರದ್ದು. ತಮ್ಮ ಹಾಲಕ್ಕಿ ಒಕ್ಕಲು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲೇ ಬೇಕು ಎನ್ನುವ ಒತ್ತಡದ ಕೂಗು ಸದಾ ಅವರ ಉಸಿರಿನಲ್ಲಿದೆ. ತಮ್ಮ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕಾದರೆ ಈಗಿರುವ ಪ್ರವರ್ಗದಲ್ಲಿಯೇ ಮುಂದುವರೆದರೆ ಸಾಧ್ಯವಾಗದ ಮಾತು. ತಮ್ಮ ಸಮುದಾಯ ಕೂಡ ಸಮಾನವಾಗಿ ಇತರರಂತೆ ಮುಂದುವರೆಯ ಬೇಕಾದರೆ ಪರಿಶಿಷ್ಟ ಪಂಗಡದ ಮೀಸಲಾತಿ ಸಿಕ್ಕರೆ ಮಾತ್ರ ಸಾಧ್ಯ. ತಾನು ಬದುಕಿರುವಾಗಲೇ ತಮ್ಮ ಜನಾಂಗ ಪರಿಶಿಷ್ಟ ಪಂಗಡಕ್ಕೆ ಸೇರಬೇಕು ಎಂಬುದು ಸುಕ್ರಿ ಗೌಡರ ಎದೆಯಾಳದ ಮಾತಾಗಿದೆ.

ಹೋರಾಟವನ್ನೇ ಉಸಿರಾಗಿಸಿಕೊಂಡಿರುವ ಸುಕ್ರಿ ಗೌಡರು ಯಾರು ಎಲ್ಲೇ ಕರೆದರೂ ಎಷ್ಟೊತ್ತಿಗೆ ಬೇಕಾದರೂ ಹಾಜರಿರುತ್ತಾರೆ. ಎಷ್ಟೋ ವೇಳೆ ಅವರನ್ನು ಅತಿಥಿಯಾಗಿ ಕರೆದವರು ವಾಹನದ ವ್ಯವಸ್ಥೆ ಮಾಡದೇ ಇದ್ದಾಗ ಆಟೋದಲ್ಲಿ, ಬಸ್‌ನಲ್ಲಿ ಸ್ವಂತ ಖರ್ಚಿನಲ್ಲೇ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಬಂದಿದ್ದು ಇದೆ. ಆಮಂತ್ರಿಸಿದವರು ಬಂದು ಹೋಗಲು ವಾಹನದ ವ್ಯವಸ್ಥೆ ಮಾಡದಿದ್ದಾಗ “ನೀವು ಹೋಗಬೇಡಿ ಎಂದರೆ, ನಮ್‌ ಹುಡಗ್ರು, ಪಾಪ, ಏನೋ ಕಾರ್ಯಕ್ರಮ ಮಾಡಿದ್ದಾರೆ. ಅವ್ರಿಗೆ ಏನ್ ತೊಂದ್ರೆ ಆಗಿದೋ ಗೊತ್ತಿಲ್ಲ. ನನ್ನಿಂದ ಕಾರ್ಯಕ್ರಮ ಹಾಳಾಗುದು ಬೇಡ” ಎನ್ನುವಷ್ಟು ಮುಗ್ದತೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video

This site uses Akismet to reduce spam. Learn how your comment data is processed.