ದುರ್ಬಲವರ್ಗದ ಬದುಕಿನ ಸಂಕಟ ಪುಟ್ಟ ಯಜಮಾನ
ಮಕ್ಕಳ ಸಾಹಿತ್ಯದಲ್ಲಿ ತಮ್ಮ ನೈಜತೆಯ ಮೂಲಕ ಕನ್ನಡ ಛಾಯೆ ಮೂಡಿಸಿರುವ ಗಣೇಶ್ ಪಿ ನಾಡೋರ ಅವರ “ಪುಟ್ಟ ಯಜಮಾನ” ಮಕ್ಕಳ ಕಾದಂಬರಿ ಭರವಸೆಯ ಕೃತಿ. ಪುಟ್ಟ ಯಜಮಾನ ದಿಟ್ಟ ಬಾಲಕ ಎನ್ನುವ ಮುನ್ನುಡಿ ಕಾರ ಬಸು ಬೇವಿನ ಗಿಡ ಮತ್ತು ನಾಗರಿಕ ಬದುಕಿನ ಅಸಹಾಯಕತೆ ಮತ್ತು ತಿಳಿಗೇಡಿ ಗೃಹಸ್ಥನ ಹೊಣೆಗೇಡಿತನ ಎನ್ನುವ ಬೆನ್ನುಡಿಯ ಹೊದಿಕೆಯಾಗಿಸಿದ ಸುನಂದಾ ಕಡಮೆ ಅವರ ಮಾತುಗಳು ಕೃತಿಯ ಒಳನೋಟವನ್ನು ಪರಿಚಯಿಸುತ್ತದೆ.
18 ಅಧ್ಯಾಯಗಳ ಮೂಲಕ ಇಡೀ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದು ಅಧ್ಯಾಯಗಳು ಒಂದಕ್ಕೊಂದು ಕೊಂಡಿ ತಾಗಿಸಿಕೊಂಡು ವಾಸ್ತವಿಕತೆಯನ್ನು ಅನಾವರಣಗೊಳಿಸಿರುವಂತೆ ಮುಂದುವರಿಸಿಕೊಂಡು ಹೋಗಿರುವುದು ಕಾದಂಬರಿಕಾರರ ಮುಂದಾಲೋಚನೆ ಕಣ್ಣಿಗೆ ಕಟ್ಟಿಕೊಡುತ್ತವೆ.
ಮುಖ್ಯ ಭೂಮಿಕೆಯಲ್ಲಿರುವ ಗಣಪತಿ ಎಲ್ಲರಿಗೂ ಯಜಮಾನ. ಶಿಕ್ಷಣ ಪಡೆಯಬೇಕೆನ್ನುವ ಅದಮ್ಯ ಉತ್ಸಾಹದೊಂದಿಗೆ ಶಾಲೆಗೆ ಹೋಗುವ ಗಣಪತಿ ಮನೆಯ ಸಮಸ್ಯೆಗೆ ಆಗಾಗ ಹೆಗಲು ಕೊಡುತ್ತ ತನ್ನ ಯಜಮಾನಿಕೆಯನ್ನು ಪ್ರದರ್ಶಿಸುತ್ತಲೇ ಪಾತ್ರಕ್ಕೆ ಆರಂಭದಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿರುವುದು. ಬದುಕು ಕಟ್ಟಿಕೊಳ್ಳಲು ಅದೆಷ್ಟೋ ಕುಟುಂಬಗಳ ಮಕ್ಕಳು ಶಿಕ್ಷಣದ ಜೊತೆ ಜೊತೆಗೆ ಕೂಲಿ ಮಾಡುತ್ತಾ ಕುಟುಂಬದ ಜವಾಬ್ದಾರಿ ಹೊತ್ತಿಕೊಂಡು ಸಮಾಜದ ಮುನ್ನೆಲೆಗೆ ಬಂದಂತ ಸನ್ನಿವೇಶಗಳು ಕಣ್ಣ ಮುಂದೆ ಹಾದು ಹೋಗುತ್ತವೆ.
ಕೋಳಿಯನ್ನು ತನ್ನ ಮಗ ಗಣಪತಿ ಹಾಗೂ ದಾಯಾದಿ ರಾಮಕೃಷ್ಣನಿಂದ ಚೊಕ್ಕಟಗೊಳಿಸಿ ಅವನಿಂದಲೇ ಮಸಾಲೆ ಅರಿದು ಕೋಳಿಸಾರು ಸಿದ್ಧಗೊಳಿಸುವ ಗಣಪತಿ ತಾಯಿ ತನ್ನ ಮಕ್ಕಳಿಗೆ ಮಾತ್ರ ಕೋಳಿ ಸಾರು ಉಣಬಡಿಸಿದ್ದು ಒಂದಿಷ್ಟು ಕಸಿವಿಸಿ ಜೊತೆಗೆ ತಿರಸ್ಕಾರಗಳು ಹುಟ್ಟಿಕೊಳ್ಳುತ್ತದೆ. ಆದರೆ ಅರಬೈಲ್ ಘಟ್ಟದಲ್ಲಿ ಲಾರಿ ಅಪಘಾತವಾಗಿರುವ ಸುದ್ದಿ ತಿಳಿದು ಹೋದಾಗ ಅಲ್ಲಿ ಅವಳ ಗಂಡನ ಬದಲು ಮೈದುನ ಮತ್ತು ಅನಾಮಿಕ ನರಳುತ್ತಿದ್ದಾಗ ಅವರ ಆರೈಕೆ ಮಾಡುವ ಸನ್ನಿವೇಶ ಮಾತೃ ಹೃದಯದ ಇನ್ನೊಂದು ಭಾಗವನ್ನು ಪರಿಚಯಿಸುತ್ತದೆ.
ಬಾಲಕ ಗಣಪತಿಯು ಅಪ್ಪನ ಲಾರಿಯಲ್ಲಿ ತಿರುಗಾಡಲು ಮಂಗಳೂರಿಗೆ ಹೋಗುವ ಸನ್ನಿವೇಶ ನಮ್ಮ ಬಾಲ್ಯದ ನೆನಪನ್ನು ಮರುಕಳಿಸುತ್ತದೆ. ಯಲ್ಲಾಪುರದ ಸುತ್ತಮುತ್ತಲೇ ಗಿರಕಿ ಹೊಡೆಯುತ್ತಾ ಸಾಗುವ ಪಾತ್ರಗಳು ಅಲ್ಲಿಯ ಪರಿಸರವನ್ನು ಚಿತ್ರಿಸುತ್ತವೆ. ಇದರೊಟ್ಟಿಗೆ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರುವುದನ್ನು ಅನಾವರಣಗೊಳಿಸಿದೆ. ಬದುಕು ಕಟ್ಟಿಕೊಳ್ಳಲು ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು ಒಂದೆಡೆಯಾದರೆ ಮನೆಯ ಪರಿಸ್ಥಿತಿಯನ್ನು ಅರಿತು ಮಕ್ಕಳೇ ಜವಾಬ್ದಾರಿ ಹೊರಲು ಮುಂದಾಗಿ ಯಜಮಾನನಾಗುವುದು ಈ ಕೃತಿಯ ಹೆಚ್ಚುಗಾರಿಕೆ.
Leave feedback about this