ಕೃಪೆ : ಸಂಜಯ ಹೊಯ್ಸಳ
ಅತ್ಯಂತ ಸುಂದರ, ಸುರಕ್ಷಿತ ಗೂಡುಗಳ ನಿರ್ಮಾಣದ ಚತುರಮತಿ ಗೀಜುಗಗಳು||
ತಮ್ಮ ಆಹಾರ ವ್ಯವಸ್ಥೆಯ ಮೂಲಕ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬೀಜ ಪ್ರಸಾರ ಮಾಡುವ, ತಮ್ಮ ಪರಾಗಸ್ಪರ್ಶ ಕ್ರಿಯೆಯ ಮೂಲಕ, ಬೀಜೋಪಚಾರದ ಮೂಲಕ ಸಂಮೃದ್ದ ಜೀವವೈವಿಧ್ಯತೆಯ ಸಹಜ ಕಾಡನ್ನು ಕಟ್ಟುವ ಬಗೆಬಗೆಯ ಖಗರಾಶಿಗಳು||
ಹೂಗಳ ಮಕರಂದ ಹೀರಿ, ಹೂವು ಕಾಯಾಗಲು ಪರಾಗಸ್ಪರ್ಶ ಕ್ರಿಯೆನಡೆಸುವ, ಅದೇ ಮಕರಂದವ ಆರಿಸಿ, ಸೋರಿಸಿ ಅಂದವಾದ ಜೇನುಗೂಡಲ್ಲಿ ಸಂಗ್ರಹಿಸಿ ತಮ್ಮ ವಂಶಾಭಿವೃದ್ಧಿಯ ಜೊತೆಗೆ ಕಾಡಿನ ವಂಶಾಭಿವೃದ್ಧಿ ಮಾಡಿವ ಜೇನುಗಳು||
ಆನೆ ನಡೆದದ್ದೆ ದಾರಿ ಎಂಬಂತೆ ವಿಶಾಲ ವ್ಯಾಪ್ತಿಯಲ್ಲಿ ನಡೆಯುತ್ತಾ, ನಡೆಯುವ ದಾರಿಯಲ್ಲೆಲ್ಲಾ ಆಹಾರಕ್ಕಾಗಿ ವಿವಿಧ ಗಿಡ, ಮರಗಳ ಟೊಂಗೆ ಕತ್ತರಿಸಿ, ಕಾಡಲ್ಲಿ ಸಹಜ ನಿಯಂತ್ರಣ ವ್ಯವಸ್ಥೆ ಸ್ಥಾಪಿಸುವ, ಬೇರೆ ಬೇರೆ ಪ್ರಾಣಿಗಳಿಗೆ ಕಾಲು ದಾರಿಗಳನ್ನು ನಿರ್ಮಿಸಿ ಕೊಡುವ, ಜೇಡಿ ಮಣ್ಣಿಗಾಗಿ ಗುಂಡಿ ಅಗೆಯುವ, ದೊಡ್ಡ ಗಾತ್ರದ ಬೀಜಗಳನ್ನು ಕಾಡಿನ ವಿವಿಧ ಭಾಗಗಳಿಗೆ ಪ್ರಸಾರ ಮಾಡುವ ಆನೆಗಳು||
ಮಣ್ಣಲ್ಲಿ ತಮ್ಮ ವಿಶಿಷ್ಟ ಗೂಡುಗಳ ಮೂಲಕ ಮಣ್ಣನ್ನು ಸಡಿಲಗೊಳಿಸುವ, ಸಹಜ ಇಂಗುಗುಂಡಿಗಳ ಮೂಲಕ ಅಂತರ್ಜಲ ವೃದ್ಧಿಸುವ ಶ್ರಮಜೀವಿ ಇರುವೆಗಳು||
ಮಣ್ಣು ತಿಂದು ಮಣ್ಣು ಉಗುಳಿ ನೆಲದಿಂದ ಹಲವು ಅಡಿಗಳಷ್ಟು ಎತ್ತರದ ಬೆಚ್ಚನೆಯ ಗೂಡು ನಿರ್ಮಿಸಿ, ತಾವು ಚಿಟ್ಟೆಯಾಗಿ ಹಾರಿಹೋಗಿ, ಆ ಗೂಡನ್ನು ಹಾವು, ಉಡದಂತ ಸರೀಸೃಪಗಳ ವಾಸಕ್ಕೆ ಉಡುಗೊರೆಯಾಗಿ ಕೊಡುವ, ಆ ಮೂಲಕ ಅವುಗಳ ಆವಾಸಸ್ಥಾನಕ್ಕೆ ಬೆನ್ನೆಲುಬಾಗಿ ನಿಲ್ಲುವ ಗೆದ್ದಲುಹುಳುಗಳು||
ಕಲಾತ್ಮಕ ಬಲೆ ಹೆಣೆಯುವ ಜೇಡಗಳು, ಪುಟಾಣಿ ಗಾತ್ರದಿಂದ ಹಿಡಿದು ಬೃಹತ್ ಗಾತ್ರದ ಸುಂದರ ಗೂಡುಗಳನ್ನು ನಿರ್ಮಿಸುವ ವಿವಿಧ ಪ್ರಭೇದದ ಕಡಜಗಳು… ಪ್ರಕೃತಿಯ ಅಭಿಯಂತರಿಗೆ ಲೆಕ್ಕವಿಲ್ಲ… ಎಲ್ಲಾ ಅಭಿಯಂತರರ ಕೆಲಸ ಪ್ರಕೃತಿಯನ್ನು ಕಟ್ಟುವುದು ಮಾತ್ರ; ಕೆಡವುವ ಒಬ್ಬನೇ ಒಬ್ಬ ಅಭಿಯಂತರ ಕಾಡಿನ ಪ್ರಕೃತಿಯಲ್ಲಿಲ್ಲ!!
Leave feedback about this