ಕುಮಟಾ; ಉತ್ತರ ಕನ್ನಡ ಜಿಲ್ಲೆ ಇಲ್ಲಿಯವರೆಗೂ ಯಾವುದೇ ಹೋರಾಟಕ್ಕೂ ಉತ್ತರ ಕಾಣದ ಜಿಲ್ಲೆಯಾಗಿದೆ ಎಂಬುದು ಜಾಗತಿಕ ಸತ್ಯ. ಕರಾವಳಿ, ಬಯಲು ಸೀಮೆ ಮತ್ತು ಮಲೆನಾಡು ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ ಭೌಗೋಳಿಕವಾಗಿ ಅತ್ಯಂತ ವಿಸ್ತಾರ ಹಾಗೂ ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾದ ಜಿಲ್ಲೆ. ಇಲ್ಲಿಯ ನೆಲ, ಜಲ ಬಳಸಿಕೊಂಡು ಇಲ್ಲಿನ ಜನರಿಗೆ ಮಾರಕವಾಗುವ ಹಲವಾರು ಯೋಜನೆಗಳು ಪ್ರಬಲ ವಿರೋಧದ ನಡುವೆಯೂ ಸ್ಥಾಪಿತಗೊಂಡಿವೆ.
ಕೈಗಾ ಅಣು ವಿದ್ಯುತ್ ಸ್ಥಾವರ ಸಂದರ್ಭದಲ್ಲಿ ಯೋಜನೆಯನ್ನು ವಿರೋಧಿಸಿ ಪರಿಸರದ ಅಕ್ಕ ಡಾ ಕುಸುಮ ಸೊರಬ ಹಲವಾರು ವರ್ಷಗಳ ಕಾಲ ಇಲ್ಲಿಯ ಜನ ಸಮುದಾಯದೊಂದಿಗೆ ನಿರಂತರ ಅಹೋರಾತ್ರಿ ಹೋರಾಟ ನಡೆಸಿದರೂ ಹೋರಾಟಕ್ಕೆ ಕ್ಯಾರೇ ಎನ್ನದೇ ಯೋಜನೆ ಅನುಷ್ಠಾನಗೊಂಡಿತು. ಡಾ. ಶಿವರಾಮ ಕಾರಂತ ರೂ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದರು.
ನಂತರದಲ್ಲಿ ಬಂದ ಸೀಬರ್ಡ್ ಯೋಜನೆ ಕರಾವಳಿ ಜನರಿಗೆ ನಿರಾಶ್ರಿತರ ಪಟ್ಟ ಕಟ್ಟಿತು. ಶರಾವತಿ ಟೇಲರೇಸ್ ಯೋಜನೆ ಹಚ್ಚ ಹಸಿರು ಕಾಡನ್ನು ನೀರಿನಲ್ಲಿ ಮುಳುಗಿಸಿತು. ಪರಿಸರ ಮಾರಕಕ್ಕೆ ಕಾರಣವಾಗುವ ಯೋಜನೆಗಳ, ಬಂಡವಾಳ ಶಾಹಿಗಳ ಸಿಂಹ ಸ್ವಪ್ನವಾಗಿ ಕಾಡಿದ ಡಾ. ಕುಸುಮಾ ಸೊರಬ ಕೊನೆಗೂ ನಿಗೂಢವಾಗಿ ಅಪಘಾತದಲ್ಲಿ ಮರಣ ಹೊಂದಿದ್ದು ಹೋರಾಟಕ್ಕೆ ಉತ್ತರ ಕಾಣಲೇ ಇಲ್ಲವಾಯಿತು.
ಎಲ್ಲಾ ಯೋಜನೆಗಳಿಗೆ ಆಶ್ರಯ ಕಾರಣವಾಗಿರುವಂತ ಉತ್ತರ ಕನ್ನಡ ಕೊಂಕಣ ರೈಲ್ವೆ, ಕಾಳಿ ವಿದ್ಯುತ್ ಇದೀಗ ಹೊನ್ನಾವರದ ಪಾವೀನ ಕುರ್ವಾ ಅಂತರಾಷ್ಟ್ರೀಯ ಬಂದರು, ಅಂಕೋಲಾ ಅಲಗೇರಿಯಲ್ಲಿ ವಿಮಾನ ನಿಲ್ದಾಣ ಹೀಗೆ ಒಂದೇ ಎರಡೇ ಹತ್ತು ಹಲವು ಯೋಜನೆಗಳು ಬಂದರೂ ಇಲ್ಲಿಯ ಜನರಿಗೆ ಮೂಲಭೂತ ಸೌಕರ್ಯ ವಾದ ಆರೋಗ್ಯಕ್ಕೆ ಪೂರವಾಗಿರುವ ಯಾವುದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿತವಾಗದಿರುವುದು ಅಚ್ಚರಿಯಾದರೂ ಸತ್ಯ. ಹಲವು ಯೋಜನೆಗಳು ಸ್ಥಾಪಿತವಾಗಿದ್ದರೂ ದೀಪದ ಬುಡದಲ್ಲಿ ಕತ್ತಲೆ ಅನ್ನುವಂತೆ ನಾಡಿಗೆ ಬೆಳಕು ಕೊಟ್ಟ ಜಿಲ್ಲೆಗೂ ವಿದ್ಯುತ್ ಕಣ್ಣ ಮುಚ್ಚಾಲೆಯ ಕತ್ತಲೆ ಭಾಗ್ಯ ತಪ್ಪಿದ್ದಲ್ಲ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟದ ಕನಸು ಇಂದು ನಿನ್ನೆಯದಲ್ಲ. ಹೋರಾಟಕ್ಕೆ ದಶಕಗಳೇ ಸಂದಿವೆ. ಹಲವು ಮಹನೀಯರು ಹೋರಾಟದಲ್ಲಿ ತಮ್ಮ ಅವಿರತ ಶ್ರಮ ಹಾಕಿದ್ದಾರೆ. ಸಂಘ ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ನೀಡಿದ್ದವು. ಸಾಮಾಜಿಕ ಜಾಲತಾಣದ ಚಳುವಳಿಯೂ ನಡೆದಿತ್ತು. ವಕೀಲರಾದ ಆರ್.ಜಿ.ನಾಯ್ಕ ಹೋರಾಟದ ನೇತೃತ್ವ ವಹಿಸಿ ಗುರಿ ತಲುಪಿಸಲು ಹಲವು ಪ್ರಯತ್ನ ಮಾಡಿರುವುದು ಸಣ್ಣ ಸಂಗತಿ ಏನಲ್ಲ. ಶಾಸಕ ದಿನಕರ ಶೆಟ್ಟಿಯವರು ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ಸ್ಥಾಪಿಸಲು ಅವಿರತವಾಗಿ ಪ್ರಯತ್ನಿಸಿ ಬಿ.ಆರ್. ಶೆಟ್ಟಿಯವರನ್ನು ಕರೆ ತಂದಿದ್ದರು. ಆಸ್ಪತ್ರೆಗೆ ಸರಕಾರಿ ಜಾಗವನ್ನು ಗುರುತಿಸಿ 2023 ಬಜೆಟ್ ನಲ್ಲಿ ಆಸ್ಪತ್ರೆ ಘೋಷಣೆಯಾಗುವಂತೆ ಮಾಡಿದ್ದರು. ಅನುದಾನದ ಕೊರತೆಯಿಂದ ಅದು ನೆನೆಗುದಿಗೆ ಬಿತ್ತು. ಅಪಘಾತಗಳು ಸಂಭವಿಸಿದಾಗ ಮತ್ತೆ ಮತ್ತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಷಯ ಜಾಗೃತವಾದರೂ ಸಫಲತೆಯನ್ನು ಕಂಡಿರುವುದಿಲ್ಲ.
ಡಾ.ಜಿ.ಜಿ.ಹೆಗಡೆ ಯವರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಚಿಂತನ ಮಂಥನಕ್ಕಾಗಿ ಪಕ್ಷಾತೀತವಾಗಿ ಎಲ್ಲರಿಗೂ ಆಮಂತ್ರಿಸಿದ್ದಾರೆ. ಡಾ ಜಿ ಜಿ ಹೆಗಡೆ ಯವರು ಕುಮಟಾದಲ್ಲಿ ಪ್ರತಿಷ್ಠಿತ ಕೆನರಾ ಹೆಲ್ತ್ ಕೇರ್ ಸೆಂಟರ್ ಆಸ್ಪತ್ರೆ ಹೊಂದಿದ್ದರೂ ಲಾಭವನ್ನು ಲೆಕ್ಕ ಹಾಕದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಚಿಂತನ ಮಂಥನ ನಡೆಸುತ್ತಿರುವುದು ಅಭಿನಂದನೀಯ. ಆದರೆ ಚಿಂತನ ಮಂಥನ ಕೇವಲ ಚರ್ಚೆಯಾಗಿ ಉಳಿಯದೇ ಡಾ. ಕುಸುಮಕ್ಕನಂತೆ ಗುರಿ ತಲುಪಿಸಲು ಡಾ ಜಿ ಜಿ ಹೆಗಡೆ ಯವರು ಗಟ್ಟಿ ನಿಲುವು ತಾಳುವರೇ ಎಂಬುವುದಕ್ಕೆ ಕಾಲವೇ ಉತ್ತರಿಸಬಲ್ಲದು.