ರಾಷ್ಟ್ರ ಮಟ್ಟಕ್ಕೆ  ಆಯ್ಕೆಯಾದ  ಅಥ್ಲಿಟ್‌ ಗಳನ್ನು ಗೌರವಿಸಲು  ಜಿಲ್ಲೆಯ ಸಚಿವ ಹಾಗೂ ಶಾಸಕರ ಜಾಣ ಮರೆವು :

ಕುಮಟಾ :  ರಾಜ್ಯಮಟ್ಟದ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಕುಮಟಾದಿಂದ ಸುಪ್ರಿಯಾ ಶಂಕರ್ ಗೌಡ- 400 ಮೀ. ಓಟ  ಹೊನ್ನಾವರದ  ಧರ್ಮೇಂದ್ರ ಸುಬ್ರಾಯ ಗೌಡ ತ್ರಿವಿಧ ಜಿಗಿತ  ಹಾಗೂ ಅಂಕೋಲಾದ ಪ್ರಕಾಶ ಸೀತಾರಾಮ ಗೌಡ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು  ಫೆಬ್ರವರಿಯಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ರಾಷ್ಟ್ರಮಟ್ಟಕ್ಕೆ  ಜಿಲ್ಲೆಯಿಂದ  ಆಯ್ಕೆಯಾಗಿರುವ ಈ ಪ್ರತಿಭೆಗಳಿಗೆ  ಶಿಕ್ಷಣ ಇಲಾಖೆ ಕನಿಷ್ಠ ಗೌರವ ನೀಡದೇ ಇರುವುದರ ಹಿಂದೆ ಜಿಲ್ಲೆಯ ಸಚಿವರ ಹಾಗೂ ಶಾಸಕರ ಜಾಣ ಮರೆವು ಇದೆಯೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಬಂದರು ಸಚಿವ ಮಂಕಾಳು ವೈದ್ಯ :

 ಶಿಕ್ಷಣ ತನ್ನ ಮೊದಲ ಆದ್ಯತೆ ಎನ್ನುವ ಸಚಿವ ಮಂಕಾಳು ವೈದ್ಯರು ತಮ್ಮ ಉಸ್ತುವಾರಿ ಜಿಲ್ಲೆಯಿಂದ ಮೂವರು ಅಥ್ಲಿಟ್‌ ಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರೂ ರಾಜ್ಯಮಟ್ಟದ ಕ್ರೀಡಾಕೂಟ ನಡೆದು ತಿಂಗಳು ಕಳೆದರೂ ಪ್ರತಿಭೆಗಳನ್ನು  ಗೌರವಿಸಲಿಲ್ಲ.   ಸ್ವಂತ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಶಿಕ್ಷಣ ಪ್ರೇಂಇಯಾಗಿರುವ  ಸಚಿವರಿಗೆ ಕ್ರೀಡಾಕೂಟದ ಮಹತ್ವದ ಅರಿವು ಇಲ್ಲವೆನ್ನುವಂತಿಲ್ಲ.  ಆದರೂ  ಅಥ್ಲಿಟ್‌ ಗಳನ್ನು ಗೌರವಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿದೆ.  ಅಥವಾ ಕೆಲಸದ ಒತ್ತಡದಲ್ಲಿರುವ ಸಚಿವರ ಗಮನಕ್ಕೆ ಇಲಾಖಾ ಅಧಿಕಾರಿಗಳು ಗಮನಕ್ಕೆ ತರಲಿಲ್ಲವೇ ಎಂಬುದು ಜನಸಾಮಾನ್ಯರ ಚರ್ಚೆಯಾಗಿದೆ.  

ಕುಮಟಾ ಶಾಸಕ  ದಿನಕರ ಶೆಟ್ಟರ ಜಾಣ ಮರೆವು :

ಕುಮಟಾ ಮತ್ತು ಹೊನ್ನಾವರ ತನ್ನ ಎರಡು ಕಣ್ಣುಗಳಿದ್ದಂತೆ. ಇದರಲ್ಲಿ ಯಾವುದೇ ಒಂದಕ್ಕೆ ನೋವಾದರೂ ಅದು ತನ್ನ ನೋವೇ ಎಂದು ಹೇಳುತ್ತಾ  ಕಾರ್ಯನಿರ್ವಹಿಸುವ ಶಾಸಕ ದಿನಕರ ಶೆಟ್ಟಿ  ತಮ್ಮ ಕ್ಷೇತ್ರ ಕುಮಟಾ ಹಾಗೂ ಹೊನ್ನಾವರ ದಿಂದ ತಲಾ ಒಬ್ಬೊಬ್ಬ ಅಥ್ಲಿಟ್‌ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದರೂ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಸುಮ್ಮನಿದ್ದಾರೆ. ಒಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಶಿಕ್ಷಣ ಪರ ಕಾಳಜಿ ಹೊಂದಿರುವ ಶಾಸಕ ಎಸ್.ಎಸ್. ಎಲ್.ಸಿ , ಪಿ.ಯು.ಸಿ ಫಲಿತಾಂಶ ಬಂದಾಗ  ಇಲ್ಲವೇ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರನ್ನು ಹುಡುಕಿಕೊಂಡು ಅವರ ಮನೆಗೆ ಹೋಗಿ ಶಾಲು ಹೊದಿಸಿ ಗೌರವಿಸುವ ಕಾರ್ಯಗಳು ಪತ್ರಿಕೆಯಲ್ಲಿ ವರದಿಯಾಗುತ್ತಲೇ ಇರುತ್ತದೆ. ಆದರೆ ಈ ಎರಡು ಪ್ರತಿಭೆ ಗಳನ್ನು ಗೌರವಿಸುವಲ್ಲಿ ಜಾಣ ಮರೆವು ಪ್ರದರ್ಶಿಸಿದರೆ ?

ಶೆಟ್ಟರಿಗೆ ಹಾಲಕ್ಕಿ ಬಗ್ಗೆ ಮುನಿಸು ಇನ್ನೂ ಕಡಿಮೆ ಆಗಿಲ್ಲವೇ ?

2023 ರಲ್ಲಿ ನಡೆದ ಚುನಾವಣೆಯಲ್ಲಿ ತಮಗೆ ಹಾಲಕ್ಕಿಗಳಿಂದ ತಾವು ನಿರೀಕ್ಷೆ ಮಾಡಿದಷ್ಟು ಬೆಂಬಲ ಸಿಕ್ಕಿಲ್ಲ. ಇದರಿಂದ ಮತಗಳಿಕೆಯ ಅಂತರ ಕಡಿಮೆಯಾಯಿತು ಎಂದು ಶೆಟ್ಟರು ಚುನಾವಣೆ ಮುಗಿದು ಎಂಟು ತಿಂಗಳು ಗತಿಸಿದರೂ  ಆಗಾಗ ಹೇಳುತ್ತಿರುವುದನ್ನು ಅವರ ಹತ್ತಿರದ ಒಡನಾಡಿಗಳು ನೆನಪಿಸಿ ಕೊಳ್ಳುತ್ತಾರೆ. ಆದರೆ 2008 ರಲ್ಲಿ ಜೆ.ಡಿ.ಎಸ್‌ ನಿಂದ ಹಾಗೂ 2018 ರಲ್ಲಿ ಹೊಸದಾಗಿ ಬಿಜೆಪಿ ಗೆ ಬಂದಾಗ ಶೆಟ್ಟರು  ಗೆಲುವಿನ ಇತಿಹಾಸ ನಿರ್ಮಿಸುವಲ್ಲಿ ಹಾಲಕ್ಕಿ ಸಮಾಜದ ಪಾತ್ರ ಮರೆತಿರುವುದು ಜಿಜ್ಞಾಸೆಗೆ ಕಾರಣವಾಗಿದೆ.  ರಾಷ್ಟ್ರಮಟ್ಟಕ್ಕೆ  ಆಯ್ಕೆಯಾಗಿರುವ ಪ್ರತಿಭೆಗಳು ಹಾಲಕ್ಕಿ ಸಮಾಜದವರು. ಬಹುಶಃ ಹಾಲಕ್ಕಿಗರ ಮೇಲಿನ ಮುನಿಸಿನಿಂದಲೇ  ಶಾಸಕರು  ಗೌರವಿಸುವ ಗೋಜಿಗೆ ಹೋಗದೇ ಜಾಣ ಮರೆವು ಪ್ರದರ್ಶಿಸಿದರೆ?   ಇದರಲ್ಲಿ ಕುಮಟಾದ ಪ್ರತಿಭೆಯ ಪಾಲಕ ಶೆಟ್ಟರ ಅಪ್ಪಟ ಕಾರ್ಯಕರ್ತ. ದಿನಬೆಳಗಾದರೆ ಶಾಸಕರ ಮನೆ ಭೇಟಿ ಮಾಡಿ ಮುಂದಡಿ ಇಡುವವರು. ಆದಾಗ್ಯೂ ಶಾಸಕರು ಎರಡು ಕಣ್ಣುಗಳನ್ನು ಕಣ್ಣುಬಿಟ್ಟು ನೋಡದೇ ಇರುವುದು  ಅವರ ಗೌರವಕ್ಕೆ ತಕ್ಕುದಾದುದಲ್ಲ ಎಂಬುದು ಕ್ರೀಡಾಪ್ರೇಮಿಗಳ ಅಂಬೋಣ.

ಕಾರವಾರ ಶಾಸಕ ಸತೀಶ ಸೈಲ್‌ ಕೂಡ ಸುಮ್ಮನಿರುವುದು ಯಾಕೆ ? :

ಹಾಲಕ್ಕಿಗಳ ಬಗ್ಗೆ ವಿಶೇಷ ಪ್ರೀತಿ ಅಭಿಮಾನ ಎನ್ನುವ ಶಾಸಕ ಸತೀಶ ಸೈಲ್‌ ತಮ್ಮ ಗೆಲುವಿನಲ್ಲಿ ಈ ಸಮಾಜದ ಪಾತ್ರ ದೊಡ್ಡದಿದೆ. ಅದನ್ನು ಮರೆಯಲು ಸಾಧ್ಯವಿಲ್ಲ ಎನ್ನುತಿದ್ದರೂ ಹಾಲಕ್ಕಿ ಹುಡುಗ  ಪ್ರಕಾಶ ಸೀತಾರಾಮ ಗೌಡನ  ಸಾಧನೆ ಗಮನಕ್ಕೆ ಬಂದಿಲ್ಲವೇ?  ಅಥವಾ ಇವರದೂ ಕೂಡ ಜಾಣ ಮರೆವೇ? ಎಂಬುದನ್ನು ಜನತೆಯೇ ಹೇಳಬೇಕು.

ಜಿಲ್ಲೆಯ ದುರಂತ :

ಜಿಲ್ಲೆಯಲ್ಲಿ ಮಲ್ಟಿಸೆಷಾಲಿಟಿ ಆಸ್ಪತ್ರೆ ವಿಷಯ ಬಂದಾಗ ತಮ್ಮ ತಮ್ಮ ಕ್ಷೇತ್ರಕ್ಕೆ ಬೇಕು ಎಂದು ಶಾಸಕರು ಅಸೆಂಬ್ಲಿಯಲ್ಲಿ  ಕಿತ್ತಾಡಿ ಕೊನೆಗೆ ಯಾವುದೇ ಕ್ಷೇತ್ರದಲ್ಲೂ  ಆಗಲು ಬಿಡದೇ ಇರುವಂತೆ ರಾಷ್ಟ್ರಮಟ್ಟದ ಪ್ರತಿಭೆಗಳನ್ನು ಗೌರವಿಸುವಲ್ಲಿ ಒಗ್ಗಟ್ಟಾಗಿ ಜಾಣಮರೆವು ಪ್ರದರ್ಶಿಸಿರುವುದು ಜಿಲ್ಲೆಯ ದುರಂತವಲ್ಲದೆ ಮತ್ತೇನನ್ನಲು ಸಾಧ್ಯ.

ಸಚಿವ ಹಾಗೂ ಶಾಸಕರ ಜಾಣ ಮರೆವು ಅಧಿಕಾರಿಗಳಿಗೆ ವರವಾಯಿತೇ ? ಹೌದು ಎನ್ನುವಂತಿದೆ. ಯಾರಾದರೊಬ್ಬ ಶಾಸಕರು, ಸಚಿವರು ಮುಂದಡಿ ಇಟ್ಟಿದ್ದರೆ ಬಹುಶಃ ಎಲ್ಲಾ ಅಧಿಕಾರಿಗಳು ಅವರನ್ನು ಹಿಂಬಾಲಿಸುತ್ತಿದ್ದರು. ಆದರೆ ಇಲ್ಲಿ ಮತಬ್ಯಾಂಕ ಪಡೆದಿರುವ ಜನಪ್ರತಿನಿಧಿಗಳೇ ಸುದ್ದಿಗೆ ಬರದಿದ್ದ ಮೇಲೆ ತಮಗ್ಯಾಕೆ ಆ ಸುದ್ದಿ ಎಂದು ಅಧಿಕಾರಿಗಳು ಮೌನಕ್ಕೆ ಜಾರಿದರ ಹಿಂದೆ ಸಚಿವ, ಶಾಸಕರ ಜಾಣ ಮರೆವು ಕೆಲಸಮಾಡಿದೆ ಎಂಬುದು   ಅಧಿಕಾರಿಗಳ ಆಪ್ತವಲಯದ ಮಾತು. 

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅಥ್ಲೀಟಗಳು : ಸುಪ್ರೀಯಾ ಶಂಕರ ಗೌಡ. ಕುಮಟಾ 400 ಮೀಟರ್‌ ಓಟ. ಧರ್ಮೇಂದ್ರ ಸುಬ್ರಾಯ ಗೌಡ. ಹೊನ್ನಾವರ ತ್ರಿವಿದ ಜಿಗಿತ. ಪ್ರಕಾಶ ಸೀತಾರಾಮ ಗೌಡ. ಅಂಕೋಲಾ ಎತ್ತರ ಜಿಗಿತ.