ರಾಷ್ಟ್ರ ಮಟ್ಟಕ್ಕೆ ಜಿಲ್ಲೆಯ  ಮೂವರು ಪ್ರೌಢಶಾಲಾ ಅಥ್ಲಿಟ್‌ ಗಳು, ಕನಿಷ್ಠ ಗೌರವ ನೀಡದ ಶಿಕ್ಷಣ ಇಲಾಖೆ :
Art & Culture Articles Karnataka Uttara Kannada

ರಾಷ್ಟ್ರ ಮಟ್ಟಕ್ಕೆ ಜಿಲ್ಲೆಯ  ಮೂವರು ಪ್ರೌಢಶಾಲಾ ಅಥ್ಲಿಟ್‌ ಗಳು, ಕನಿಷ್ಠ ಗೌರವ ನೀಡದ ಶಿಕ್ಷಣ ಇಲಾಖೆ :

ಕುಮಟಾ :  ಡಿಸೆಂಬರ್‌ ಮೊದಲ ವಾರದಲ್ಲಿ ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಕುಮಟಾ ತಾಲೂಕಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಪ್ರಿಯಾ ಶಂಕರ್ ಗೌಡ- 400 ಮೀ. ಓಟ ಸ್ಪರ್ಧೆಯಲ್ಲಿ ದ್ವಿತೀಯ ಯ ಸ್ಥಾನ‌

ಹೊನ್ನಾವರ ತಾಲೂಕಿನ ಕಡತೋಕಾ ಜನತಾ ವಿದ್ಯಾಲಯದ ಧರ್ಮೇಂದ್ರ ಸುಬ್ರಾಯ ಗೌಡ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಹಾಗೂ ಅಂಕೋಲಾ ತಾಲೂಕಿನ ಸರಕಾರಿ ಪ್ರೌಢಶಾಲೆ ಸುಂಕಸಾಳದ ಪ್ರಕಾಶ ಸೀತಾರಾಮ ಗೌಡ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು  ಫೆಬ್ರವರಿಯಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂಬುದು ಇಡೀ ಜಿಲ್ಲೆ ಅಭಿಮಾನ ಪಡುವ ಸಂಗತಿಯಾಗಿದೆ. ರಾಷ್ಟ್ರಮಟ್ಟಕ್ಕೆ ಕಾರವಾರ ಜಿಲ್ಲೆಯಿಂದ  ಆಯ್ಕೆಯಾಗಿರುವುದು  ಈ ಮೂವರು ವಿದ್ಯಾರ್ಥಿಗಳು ಮಾತ್ರ ಎಂಬುದು ಸಂತೋಷದ ವಿಷಯವಾಗಿದೆ.

ಕನಿಷ್ಟ ಗೌರವ ನೀಡದ ಶಿಕ್ಷಣ ಇಲಾಖೆ :

ಈಗಾಗಲೇ ರಾಜ್ಯಮಟ್ಟದ ಕ್ರೀಡಾಕೂಟ ನಡೆದು  ತಿಂಗಳು ಕಳೆದಿವೆ. ತವರಿಗೆ ಬಂದು ರಾಷ್ಟ್ರಮಟ್ಟಕ್ಕೆ ಹೋಗಲು  ಸಿದ್ದತೆಯಲ್ಲಿರುವ ಅಥ್ಲೀಟಗಳನ್ನು ಕುಮಟಾ, ಹೊನ್ನಾವರ, ಅಂಕೋಲಾ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳಾಗಲಿ, ಜಿಲ್ಲೆಯ ಉಪನಿರ್ದೇಶಕರಾಗಲಿ, ದೈಹಿಕ ಪರಿವೀಕ್ಷಣಾಧಿಕಾರಿಗಳಾಗಲಿ, ಶಿಕ್ಷಕರ ಸಂಘಟನೆಗಳಾಗಲಿ ಸೌಜನ್ಯಕ್ಕೂ  ಅಭಿನಂದಿಸದಿರುವುದು ಕ್ರೀಡಾಪ್ರೇಮಿಗಳಿಗಳಿಗೆ ಶಿಕ್ಷಣ ಇಲಾಖೆ ಮೇಲೆ ಜಿಗುಪ್ಸೆ ಬರುವಂತಾಗಿದೆ. 

ದಕ್ಷಿಣ ಕನ್ನಡದ ಅಧಿಕಾರಿಗಳನ್ನ ನೋಡಿ ಕಲಿಯಿರಿ :

ಜಿಲ್ಲೆಯ ಅಧಿಕಾರಿಗಳು  ರಾಜ್ಯಮಟ್ಟದ ಕ್ರೀಡಾಕೂಟ ಸಂಘಟಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾರ್ಯಕ್ರಮ ನೋಡಿದ್ದರೆ  ಅವರ ಕ್ರೀಡಾಪ್ರೇಮ ಮತ್ತು ಅವರು ಕ್ರೀಡೆಗೆ ನೀಡುವ ಪ್ರೋತ್ಸಾಹ ಅರಿವಾಗುತ್ತಿತ್ತು.  ಅಲ್ಲಿ ವಿಜಯಿಯಾದ ಪ್ರತಿ ವಿಭಾಗದ ವಿಜೇತರನ್ನು ವಿಶೇಷ ಉಡುಪಿನಲ್ಲಿ ಮೆರವಣಿಗೆ ಮಾಡಿಸಿ ಅವರೊಂದಿಗೆ ತಾವೂ ಹೆಜ್ಜೆ ಹಾಕಿ ಗೌರವಿಸಿರುವ ರೀತಿ ನೋಡಿ ಅನುಷ್ಠಾನ ಮಾಡಿಕೊಂಡರೆ ಕ್ರೀಡೆಯಲ್ಲಿ ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮುವುದರಲ್ಲಿ ಅಚ್ಚರಿಯಿಲ್ಲ.

ಮೆಡಿಕಲ್‌ ಪ್ರಮಾಣ ಪತ್ರ ಮಾಡಿಸಲೂ ಪಾಲಕರೇ ಕಾರವಾರಕ್ಕೆ ಹೋಗಬೇಕು :

ರಾಷ್ಟ್ರ ಮಟ್ಟಕ್ಕೆ ಆಯ್ಕೆ ವಿದ್ಯಾರ್ಥಿಗಳ ಫಿಟ್‌ ನೆಸ್‌ ಗಾಗಿ  ಜಿಲ್ಲಾ ಸರ್ಜನ್‌ ರಿಂದ ಸರ್ಟಿಫಿಕೇಟ್‌ ತರಬೇಕು ಎಂಬುದು ಇಲಾಖಾ ನಿಯಮ. ಅದನ್ನು ಮಾಡಿಸಲು ಅಥ್ಲೀಟ್‌ ಗಳ ಪಾಲಕರೇ  ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪ್ರತಿಭೆಗಳನ್ನು ಬಸ್‌ ನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಕ್ಯೂ ನಿಂತು ಸರ್ಟಿಪಿಕೆಟ್‌ ಗಾಗಿ ಪರದಾಡಿದ್ದು ಶೋಚನೀಯ ಸಂಗತಿಯಾದರೂ ಶಿಕ್ಷಣ ಇಲಾಖೆ ತಲೆತಗ್ಗಿಸ ಬೇಕಾದ ಘಟನೆ ಎಂಬುದು ಪ್ರತ್ಯಕ್ಷ ದರ್ಶಿಗಳ ಮಾತು.

ಪ್ರತಿಭೆ ಗೌರವಿಸಲು ಜಾತಿ ಅಡ್ಡ ಬಂದೀತೆ ? :

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮೂವರೂ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ , ರಾಜಕೀಯವಾಗಿ ಹಿಂದುಳಿದ ಹಾಲಕ್ಕಿ ಬುಡಕಟ್ಟು ಸಮುದಾಯದವರಾಗಿದ್ದಾರೆ ಎಂಬುದು ವಿಶೇಷ. ಯಾವುದೇ ಗಾಡ್‌ ಫಾದರ್‌ ಗಳು ಇಲ್ಲದ ಇವರನ್ನು ಗೌರವಿಸದರೂ ಅಷ್ಟೇ, ಬಿಟ್ಟರೂ ಅಷ್ಟೇ ಎಂಬುದು  ಇಲಾಖಾ ಅಧಿಕಾರಿಗಳ ಕಪೋಕಲ್ಪಿತ ವಿಚಾರವಾಗಿರಬಹುದು ಎಂಬುದು ಜನಸಾಮಾನ್ಯರು ಆಡುವಂತಾಗಿದೆ.

 ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ಎನಗೆ ಎನ್ನುವ ಕವಿವಾಣಿಯಂತೆ  ಯಾರು ಗೌರವಿಸಲಿ ಬಿಡಲಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೂ ಜಿಲ್ಲೆಯ, ರಾಜ್ಯದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಹಾರಿಸಲಿ ಎಂಬುದು ಕ್ರೀಡಾಪ್ರೇಮಿಗಳ ಹಾರೈಕೆ.