ಅಂಕೋಲಾ; ಕುಂಭದ್ರೋಣ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ ರಾಷ್ಟ್ರೀಯ ಸುದ್ದಿಯಾಗಿದ್ದು ಅದರ ಪ್ರಖರತೆಯನ್ನು ಬಿಂಬಿಸುತ್ತದೆ. ಸರಿಸುಮಾರು ತಿಂಗಳುಗಳ ಕಾಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರ ಬಂದ್ ಆಗಿ ಎಲ್ಲವೂ ಅಸ್ತವ್ಯಸ್ತವಾಗಿತ್ತು. 8 ಜನರ ದುರಂತದಲ್ಲಿ ಬಲಿಯಾದರೆ ಮೂವರು ದುರಂತದ ತೀವ್ರತೆಯನ್ನು ಸಾದರ ಪಡಿಸುತ್ತದೆ. ಗುಡ್ಡಕುಸಿತದಿಂದ ಶಿರೂರು ತೀವ್ರತೆ ಅನುಭವಿಸಿದರೂ ನಿಜವಾಗಿಯೂ
ದುರಂತ ದಿಂದ ಪಕ್ಕದ ಉಳುವರೆ ಗ್ರಾಮ ಸಂತ್ರಸ್ಥರ ಕೇಂದ್ರವಾಗಿತ್ತು. ಇದರಲ್ಲಿ ಐದು ಕುಟುಂಬಗಳ ಮನೆಗಳು ಸಂಪೂರ್ಣವಾಗಿ ಪ್ರವಾಹದಿಂದ ನಾಶವಾಗಿತ್ತು. ಇಂತಹ ಕುಟುಂಬಕ್ಕೆ ನೆರವಾಗುವ ಸದುದ್ದೇಶನಿಂದ ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲು ನೌಕರರ ಸಂಘವು ಹಾಲಕ್ಕಿ ನೌಕರರಿಂದ ಸಂಗ್ರಹಿಸಿದ ಮೊತ್ತ ರೂ.2.76 ಲಕ್ಷವನ್ನು
ಉಳುವರೆ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಕ್ಕೆ ನೀಡಿತು.
ಪ್ರವಾಹಕ್ಕೆ ಕೊಚ್ಚಿ ಹೋದ ಮನೆ ಕುರುಹು ಜಾಗದಲ್ಲಿಯೇ ಅವರವರ ಕುಟುಂಬದ ಫಲಾನುಭವಿಗೆ ಚೆಕ್ ರೂಪದಲ್ಲಿ ಆರ್ಥಿಕನೆರವು ನೀಡಿದರು. ಸಂಪೂರ್ಣ ಮನೆ ಕಳೆದುಕೊಂಡಮಂಜುನಾಥ ಹನುಮಂತ ಗೌಡ , ನೀಲಾ ಮುದ್ದು ಗೌಡ , ದಾದ ತುಳಸಪ್ಪ ಗೌಡ ,ಬೊಮ್ಮ ಅನಂತ ಗೌಡ , ಗಣಪತಿ ಬೊಮ್ಮ ಗೌಡರವರಿಗೆ ತಲಾ 50 ಸಾವಿರ, ಭಾಗಶಃಮನೆಯನ್ನು ಕಳೆದುಕೊಂಡ ಅದರ ಸಂಪೂರ್ಣ ಶೀತಲಾವಸ್ಥೆಯಲ್ಲಿರುವ ಮನೆಯ ಮಾಲೀಕಗೋವಿಂದ ಕೃಷ್ಣ ಗೌಡರವರಿಗೆ 21009/- ಹಾಗೂ ಪ್ರವಾಹ ಸಂದರ್ಭದಲ್ಲಿ ಮಕ್ಕಳನ್ನು ರಕ್ಷಣೆ ಮಾಡಿದ ಹೂವಾ ಗೌಡರಿಗೆ 5 ಸಾವಿರ ರೂಪಾಯಿಗಳ ಚೆಕ್ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜಂಗಾ ಗೌಡರವರು ಈ ವರ್ಷ ಶಿರೂರು ಗುಡ್ಡ ಕುಸಿತ ದುರ್ಘಟನೆಇಡೀ ದೇಶದ ಮಟ್ಟದಲ್ಲಿ ಗಮನ ಸೆಳೆದಿದ್ದು ಅಪಾರ ಸಂಖ್ಯೆಯಲ್ಲಿ ಆರ್ಥಿಕ ನಷ್ಟ ಸಂಭವಿಸಿದೆ. ಉಳುವರೆ ಗ್ರಾಮದಲ್ಲಿ ಹಾಲಕ್ಕಿ ಸಮಾಜದ ಕುಟುಂಬಗಳು ಹೆಚ್ಚಿನ ರೀತಿಯಲ್ಲಿ ಸಂತ್ರಸ್ತರಾಗಿದ್ದು ದುಃಖಕರ ಸಂಗತಿಯಾಗಿದೆ.ಸಣ್ಣಿ ಗೌಡ ರವರು ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತರಾಗಿದ್ದಾರೆ. ಈ ಘಟನೆ ಕುರಿತಂತೆ ನಮ್ಮ ಹಾಲಕ್ಕಿ ನೌಕರರ ಸಂಘದಲ್ಲಿ ಚರ್ಚಿಸಲಾಗಿ ಎಲ್ಲರೂ ಕೈಜೋಡಿಸುವ ಮೂಲಕ ಸಹಾಯ ಮಾಡೋಣ ಎನ್ನುವ ಒಮ್ಮತದ ಅಭಿಪ್ರಾಯದ ಮೇರೆಗೆ 10 ದಿನಗಳ ಕಾಲಾವಕಾಶದಲ್ಲಿಸಂಗ್ರಹಿಸಿದ ಒಟ್ಟು ಮೊತ್ತವನ್ನು ಇಂದು ವಿತರಿಸಿದ್ದೇವೆ.ನಮ್ಮ ನೌಕರರ ಬಾಂಧವರು ನಮ್ಮ ಕರೆಗೆ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಿದ್ದು ಕೆಳಸ್ತರದಲ್ಲಿರುವ ನಮ್ಮ ಜನಗಳ ಬಗ್ಗೆ ನೌಕರರು ಹೊಂದಿರುವ ಪ್ರೀತಿಯ ಬಗ್ಗೆ ನಮಗೆ ಅಭಿಮಾನ ಮೂಡುವಂತಾಗಿದೆ. ಶಿರೂರು ದುರಂತದ ತುರ್ತು ನಿಧಿಗೆ ಸಹಾಯ ಮಾಡಿದ ಎಲ್ಲ ನೌಕರ ಬಾಂಧವರಿಗೆ ಧನ್ಯವಾದ ಹೇಳಿದರು.
ಸಂಘದ ಗೌರವ ಅಧ್ಯಕ್ಷ ಡಾ ಶ್ರೀಧರ ಗೌಡ ಉಪ್ಪಿನಗಣಪತಿ ಮಾತನಾಡಿ ಸಮಾಜದಲ್ಲಿ ಹುಟ್ಟಿದ ಪ್ರತಿಯೊಬ್ಬರು ಆಯಾ ಸಮಾಜಕ್ಕೆ ಋಣಿಯಾಗಿರುತ್ತಾರೆ ಎನ್ನುವುದಕ್ಕೆ ಇವತ್ತು ಹಾಲಕ್ಕಿ ನೌಕರರ ಸಂಘ ಸಂಗ್ರಹಿಸಿದ ನಿಧಿ ಸಾಕ್ಷಿಯಾಗಿದೆ. ಶಿರೂರುಗುಡ್ಡ ದುರಂತದಲ್ಲಿ ತಮ್ಮ ಸಂಪೂರ್ಣ ಬದುಕನ್ನು ಕಳೆದುಕೊಂಡ ಕುಟುಂಬಗಳು ಇಂದು ಅತಂತ್ರವಾಗಿದೆ. ದುರಂತ ಸಂಭವಿಸಿದ ಎರಡನೇ ದಿನವೇ ಇಲ್ಲಿಗೆ ಭೇಟಿ ನೀಡಿ ಇಲ್ಲಿಯ ಚಿತ್ರಣ ನೋಡಿದ್ದೇವೆ. ಕುಮಟಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇವೆ. ಸಂತ್ರಸ್ತರಲ್ಲಿ ಇಂದು ಕೆಲವರು ಬಾಡಿಗೆ ಮನೆಯಲ್ಲಿ ಮತ್ತೆ ಕೆಲವರು ನೆಂಟರ ಮನೆಯಲ್ಲಿ ದಿನ ದೂಡುತ್ತಿದ್ದಾರೆ. ಪ್ರಕೃತಿಯ ಕ್ರೌರ್ಯ ಈ ಕುಟುಂಬಗಳ ಬದುಕು ಮೂರಾಬಿಟ್ಟೆ ಯಾಗಿಸಿದೆ. ಸಮಾಜ ಬಾಂಧವರ ಅಸಹಾಯಕ ಪರಿಸ್ಥಿತಿಯನ್ನು ತಿಳಿದು ಈ ಸಂತ್ರಸ್ತರಿಗೆ ಏನಾದರೂ ಸಹಾಯ ಮಾಡಲೇಬೇಕು ಎನ್ನುವ ಸದುದ್ದೇಶದಿಂದ ನಮ್ಮ ನೌಕರರ ಸಂಘ ನೌಕರರಲ್ಲಿ ಮನವಿ ಮಾಡಿದಾಗ ಸ್ಥಳೀಯ ಮಟ್ಟದಲ್ಲಿರುವ ನೌಕರ ಜೊತೆಗೆ ತಮ್ಮ ಬದುಕು ಕಟ್ಟಿಕೊಳ್ಳಲು ರಾಜ್ಯದ ಮೂಲೆ ಮೂಲೆಯಲ್ಲಿರುವ ನೌಕರ ಬಾಂಧವರೂ ಸಹ ಆನ್ಲೈನ್ ನಲ್ಲಿ ಸಂಘದ ಖಾತೆಗೆ ಹಣ ಜಮಾ ಮಾಡುವುದರ ಮೂಲಕ ಸಮಾಜದ ಬಗ್ಗೆ ತಮ್ಮ ತುಡಿತವನ್ನು ತೋರಿದ್ದು ಹೃದಯ ತುಂಬಿ ಬರುವಂತೆ ಮಾಡಿದೆ. ಈ ಮೂಲಕ ಸಮಾಜ ಬಾಂಧವರ ಕಷ್ಟಕರ ಸನ್ನಿವೇಶದಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಲ್ಲಾ ನೌಕರ ಬಾಂಧವರಿಗೆ ಕೃತಜ್ಞತೆ ತಿಳಿಸಿದರು. ಆದಷ್ಟು ಬೇಗ ಸರ್ಕಾರ
ಮನೆ ಕಳೆದುಕೊಂಡವರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರದಿಂದ ಜಾಗ ನೀಡಿ ಮನೆ ಕಟ್ಟಿಸಿಕೊಡಬೇಕು ಎಂದು ಸರ್ಕಾರಕ್ಕೆ ವಿನಂತಿಸಿದರು.ಸಂತ್ರಸ್ತರಿಗೆ ದುರ್ಘಟನೆಯ ಬಗ್ಗೆ ದುಃಖಿಸುವುದು ಬೇಡ ನಿಮ್ಮ ಜೊತೆಗೆ ಇಡೀ ನೌಕರರ ಬಾಂಧವರು ಇದ್ದೇವೆ ಎಂದು ಧೈರ್ಯ ತುಂಬಿದರು.
ಫಲಾನುಭವಿಗಳ ಪರವಾಗಿ ಮಾತನಾಡಿದ ನೀಲಾ ಮುದ್ದು ಗೌಡರವರು ನಮ್ಮ ಕಷ್ಟಕ್ಕೆ ಸಹಾಯ ಮಾಡಿದ ನಮ್ಮ ಸಮಾಜದ ನೌಕರರಿಗೆ ದೇವರು ಒಳ್ಳೆಯದು ಮಾಡಲಿ ಅವರು ಆರೋಗ್ಯ ಪೂರ್ಣವಾಗಿರಲಿ ಎಂದು ಹರಸಿದರು. ಇದೇ ವೇಳೆಯಲ್ಲಿ ಸಂಘವು ಮೃತ ಸಣ್ಣಿ ಗೌಡರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ನೂತನ ಗೌಡ, ಕಾರ್ಯದರ್ಶಿ ಅರುಣ್ ಗೌಡ, ಸಂಘದ ನಿಕಟಪೂರ್ವ ಅಧ್ಯಕ್ಷ ಆರ್.ಪಿ.ಗೌಡ , ಪದಾಧಿಕಾರಿಗಳಾದ ಬಿ ಎಸ್ ಗೌಡ, ಹೇಮಲತಾ ಗೌಡ, ನಿವೃತ್ತ ಎಎಸ್ಐ ನಾರಾಯಣ ಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.