ಸಂಪಾದಕೀಯ…
Editorial Karnataka Uttara Kannada

ಸಂಪಾದಕೀಯ…

ಬೆಳಕು ಇಲ್ಲದ ದಾರಿಯಲ್ಲಿ ನಡೆಯ ಬಲ್ಲೆನು ತಾಯೆ

ಕನಸು ಇಲ್ಲದ ಹಾದಿಯಲ್ಲಿ ಹೇಗೆ ತಾನೆ ನಡೆಯಲಿ ?

                                                     – ಗಿರೀಶ್‌ ಕಾರ್ನಾಡ

  “ ನೀವು ಯಾವುದೋ ಒಂದು ಶ್ರೇಷ್ಠ ಉದ್ದೇಶದಿಂದ ಪ್ರೇರಿತರಾಗಿದ್ದರೆ, ಒಂದು ಅಸಾಧಾರಣವಾದ ಕಾರ್ಯಯೋಜನೆಯಿಂದ ಉತ್ತೇಜಿತರಾಗಿದ್ದರೆ, ನೀವೆಲ್ಲಾ ಆಲೋಚನೆಗಳು ತಮ್ಮ ಬಂಧನಗಳನ್ನು ಕಿತ್ತೊಗೆದು ವಿಮೋಚಿತವಾಗುತ್ತವೆ. ನಿಮ್ಮ ಮನಸ್ಸು ಮಿತಿಗಳನ್ನು ದಾಟಿ ಹೋಗುತ್ತವೆ. ನಿಮ್ಮ ಪ್ರಜ್ಞೆಯು ಎಲ್ಲಾ ಎಲ್ಲ ದಿಕ್ಕುಗಳಲ್ಲಿಯೂ ವಿಸ್ತøತಗೊಳ್ಳುತ್ತದೆ ಮತ್ತು ನಿಮ್ಮನ್ನು ನೀವು ಒಂದು ಹೊಸ, ಶ್ರೇಷ್ಠವಾದ ಮತ್ತು ಅದ್ಭುತ ಜಗತ್ತಿನಲ್ಲಿ ಕಾಣುತ್ತೀರಿ. ಸುಪ್ತವಾಗಿರುವ ಬಲಗಳು, ಜಾಣ್ಮೆಗಳು ಮತ್ತು ಕೌಶಲಗಳು ಸಜೀವಗೊಳ್ಳುತ್ತವೆ. ನೀವು ಎಂದೂ ಕನಸಿನಲ್ಲಿಯೂ ಕಲ್ಪಿಸಿಕೊಂಡಿಲ್ಲದಂತಹ ಒಬ್ಬ ಶ್ರೇಷ್ಠತಮ ವ್ಯಕ್ತಿಯಾಗಿರುವುದನ್ನು ಕಾಣುತ್ತೀರಿ”   ಎನ್ನುವ  ಮಹರ್ಷಿ ಪತಂಜಲಿಯ ನುಡಿಗಳು ಹೊಸಕಾರ್ಯ ಮಾಡಲು ಇಲ್ಲವೆ ಚಾಲ್ತಿಯಲ್ಲಿರುವ ಕೆಲಸ ಬಿಟ್ಟು ಬಿಡದೇ ಮುಂದುವರೆಸಲು ನಮಗೆ  ಪ್ರೇರಕ. 

ಹಾಗಾಗಿ ಯೋಚನೆಯಿಂದ ಯೋಜನೆ ರೂಪಿಸಿದರೆ ಯಶಸ್ಸು ಪ್ರಾಪ್ತ. ಆಲೋಚಿಸದೆ, ಯೋಜಿಸದೇ ಪ್ರವೃತ್ತಮಾನವಾದರೆ ಗುರಿ ಮುಟ್ಟಲು ಅಸಾಧ್ಯ. ಆಗ ಭ್ರಮನಿರಸನ ಉಂಟಾಗಿ ಖಿನ್ನತೆ ಕಾಡಬಹುದು. ಇದರಿಂದ ಬದುಕು ನಿರ್ದಿಗಂತವಾಗಿ ಶೂನ್ಯವೆನಿಸಿ ಕಳೆದು ಹೋಗುವ ಸಾಧ್ಯತೆಗಳು ಅಧಿಕ.  ನಾವು ಎಲ್ಲಿಯ ವರೆಗೆ ಪರೀಕ್ಷೆಗೆ ಒಳಗಾಗಿದ್ದೇವೆಯೋ ಅಲ್ಲಿವರೆಗೆ ಮಾತ್ರ ನಾವು ನಮ್ಮ ಬಗ್ಗೆ ಬಲ್ಲೆವು. ಸುಮಾರು ಆರೂವರೆ ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಕನ್ನಡ, ತೆಲಗು, ತುಳು, ಮಲೆಯಾಳಿ, ಇಂಗ್ಲೀಷ, ಹಿಂದಿ, ಕೊಂಕಣಿ, ಮರಾಠಿ, ಕೊಡವ ಸೇರಿದಂತೆ ಕನ್ನಡ ಭಾಷೆಯಲ್ಲೆ ವಿಶಿಷ್ಟವೆನೆಸುವ ಉತ್ತರ ಕರ್ನಾಟಕದ ಧಾರವಾಡ ಕನ್ನಡ, ಮೈಸೂರು ಕನ್ನಡ, ಮಂಗಳೂರು ಕನ್ನಡ ಭಾಷೆಗಳು ಚಾಲ್ತಿಯಲ್ಲಿವೆ. ಕನ್ನಡ ಭಾಷೆಯ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಪಡೆಯುವುದರ ಮೂಲಕ ಪ್ರಾದೇಶಿಕ ಭಾಷೆ ಕನ್ನಡ ತನ್ನ ಅಸ್ಮಿತೆಯನ್ನು ದೇಶವ್ಯಾಪಿಗೊಳಿಸಿದೆ. ಕರ್ನಾಟಕದ ಕರಾವಳಿಯ ತೀರವು ಸುಮಾರು 140 ಕಿ.ಮಿ ಉದ್ದಗಲ ಹೊಂದಿದ್ದು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡಿವೆ. ಪಶ್ಚಿಮಕ್ಕೆ ಅರಬ್ಬಿ ಸಮುದ್ರ ಪೂರ್ವಕ್ಕೆ ಸಹ್ಯಾದ್ರಿ ಬೆಟ್ಟಗಳ ಮಧ್ಯೆ ವ್ಯಾಪಿಸಿಕೊಂಡಿರುವ ಜಿಲ್ಲೆಗಳು ಇತ್ತೀಚಿನ ವರ್ಷಗಳಲ್ಲಿ ಧರ್ಮದಂಗಲ್‍ಗೆ ಖ್ಯಾತಿ ಪಡೆದಿವೆ.

ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ನೇತ್ರಾವತಿ ನದಿಗಳು ಒಳನಾಡಿನ ಜನತೆಯ ಬದುಕು ಹಸನಾಗಿಸಿವೆ. ಮಂಗಳೂರು, ಮಲ್ಪೆ, ತದಡಿ, ಕಾರವಾರ ಬಂದರುಗಳು ಮತ್ಸ್ಯೋದ್ಯಮದಲ್ಲಿ ರಾಜ್ಯ, ರಾಷ್ಟ್ರಕ್ಕೆ ಕೊಡುಗೆ ನೀಡಿದೆ. ಸಮುದ್ರತೀರ ಪ್ರವಾಸಿಗರ ಸ್ವರ್ಗವೆನಿಸಿದೆ. ಜಗತ್ತೆಂಬುದು ವೈವಿಧ್ಯಮಯ ತರಬೇತು ಶಾಲೆ. ಇಲ್ಲಿ ರೈತನು ಮಳೆಯನ್ನು ಬೇಡಿದರೆ ಅಗಸನು ಬಿಸಿಲನ್ನು ಬೇಡುತ್ತಾನೆ. ಇರ್ವರೂ ಒಂದೇ ಆಕಾಶವೆಂಬ ಸೂರಿನಡಿಯಲ್ಲಿ ಬದುಕಲೇ ಬೇಕಾದ ಅನಿವಾರ್ಯತೆ ಇದೆ. ಅಂತೆಯೇ ಕರಾವಳಿಯಲ್ಲಿ ಮೀನುಗಾರರು, ಆದಿವಾಸಿಗಳು, ಕೃಷಿಕರು ಸೇರಿದಂತೆ ಚಾತುರ್ವಣ ಸಮುದಾಯವಿದೆ. ಆರ್ಥಿಕ ಅಸಮಾನತೆ, ರಾಜಕೀಯ ಅಸಮಾನತೆಗಳು ಜನಜೀವನದ ಮೇಲೆ ಮಹತ್ವದ ಪರಿಣಾಮ ಬೀರಿವೆ.

ರವಿ ಕಾಣದ್ದನ್ನು ಕವಿ ಕಂಡ ಎನ್ನುವಂತೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಕಾಣದ ವ್ಯವಸ್ಥೆಯನ್ನು ಮಾಧ್ಯಮಗಳು ಮುನ್ನೆಲೆಗೆ ತರುತ್ತಿವೆ. ಈಗಾಗಲೇ ಬೆಳಕಿಗೆ ತರಲು ಸಾಧ್ಯವಾಗಿದ್ದು ಬಹಳಷ್ಟು ಆದರೂ ಇನ್ನಷ್ಟು ಬಾಕಿ ಇರುವವುದಂತು ಸತ್ಯ. ಿದರೊಂದಿಗೆ ವಾಸ್ತವತೆಯ ಮೇಲೆ ಬೆಳಕು ಚೆಲ್ಲುವುದು ಬಹಳ ಮುಖ್ಯವೆನಿಸಿದೆ.ಸಂತ ಫಕೀರನಂತೆ ವಿಚಾರ ಲಹರಿ ಹರಿಯ ಬಿಟ್ಟರೆ ಸುತ್ತಿ ಸುತ್ತಿ ವಿಸ್ತಾರಗೊಳಿಸುತ್ತಲೇ ಮುನ್ನೆಲೆಗೆ ಬರುತ್ತವೆ.ಶ್ರಮದ ಬದುಕಿನೊಡನೆ ಬದುಕು ಕಟ್ಟಿಕೊಂಡವರ, ನೆಲಸಂಸ್ಕøತಿಗೆ ಒಗ್ಗಿಕೊಂಡು ಕೃಷಿಯನ್ನೇ ಉಸಿರಾಗಿಸಿ ಜಗತ್ತನ್ನು ಹಸಿರಾಗಿಸಿರುವ ರೈತಾಪಿ ವರ್ಗವನ್ನ, ಅಬ್ಬರದ ತೆರೆಯನ್ನು ಲೆಕ್ಕಿಸದೆ ಉಕ್ಕುವ ಕಡಲಿಗೆ ವಿರುದ್ದವಾಗಿ ಸಾಗುತ್ತಲೇ ಮೀನುಗಾರಿಕೆಯಿಂದಲೇ ಜೀವನ ನಡೆಸುವ ಕಡಲಿಗರನ್ನ, ದಿನಬೆಳಗಾದರೆ ಉಳ್ಳವರ ಮನೆಯ ಕದತಟ್ಟಿ ಕೂಲಿಯಿಂದಲೇ ಜೀವನ ದೂಡುತ್ತಿರುವ ಕೂಲಿಕಾರರನ್ನ, ಶ್ರಮಿಕರನ್ನ, ತಮ್ಮ ವಿಶಿಷ್ಟ ಸಂಸ್ಕøತಿಯಿಂದ ಹೊರಜಗತ್ತಿನಿಂದ ದೂರವೇ ಉಳಿದು ಬದುಕು ಸವೆಸುವ ಆದಿವಾಸಿ ಬುಡಕಟ್ಟು ಸಮುದಾಯ ಇನ್ನೂ ಇನ್ನೂ. ಇವುಗಳು ಆರ್ಥಿಕ ಹಿನ್ನಡೆಯಿಂದ  ರಾಜಕೀಯ ಅಸಮಾನತೆಗಳಿಂದ ಬದುಕಿನ ಸಾಮಾಜಿಕ, ಶೈಕ್ಷಣಿಕ ಜೀವನದಲ್ಲಿ ಅತ್ತ ಆರಕ್ಕೇರದೆ, ಮೂರಕ್ಕಿಳಿಯದೆ ದಿನಗಳನ್ನು ಸವೆಸುತ್ತಿವೆ.

    ಮಳೆಗಾಲದಲ್ಲಿ ಅಬ್ಬರಿಸಿ ಧುಮ್ಮಿಕ್ಕಿ ಹರಿದು ಹಳ್ಳ-ಕೊಳ್ಳಗಳನ್ನು ಸೇರಿಸಿ ಭೋರ್ಗರೆವ ಕಡಲು ಸೇರುವ ನದಿಗಳು ಬೇಸಿಗೆಯಲ್ಲಿ ಬಹುಪಾಲು  ಬರಿದಾಗಿ ಒಡಲನ್ನು ಒಣಗಿಸಿಕೊಂಡಿರುತ್ತವೆ. ಬೇಸಿಗೆಯಲ್ಲಿ ವಿಪರೀತ ಸೆಕೆ. ಮುಂಗಾರಿನಲ್ಲಿ ಭತ್ತ ಬೆಳೆಯುವ ಭೂಮಿ ಬೇಸಿಗೆಯಲ್ಲಿ ಬಂಜರು ಬೀಳುತ್ತವೆ. ಅಡಿಕೆ, ತೆಂಗು ವಾಣಿಜ್ಯ ಬೆಳೆಯಾಗಿದ್ದು ಮತ್ತದೇ  ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬೆಳೆಗಾರರನ್ನು ಇಕ್ಕಟ್ಟಿಗೆ ಸಿಳುಕಿಸುತ್ತದೆ. ಕರಾವಳಿ ಭಾಗ ಮರಳು ಮಿಶ್ರಿತ ಮಣ್ಣಿನಿಂದ  ಕೂಡಿದ್ದು ನೀರನ್ನು ಹಿಡಿದಿಡಲು ಸಾಧ್ಯವಾಗುವುದಿಲ್ಲ. ಇದರಿಂದ ತೇವಾಂಶ ಕೂಡ ಬೇಗನೆ ಒಣಗುತ್ತದೆ. ಇಲ್ಲಿನ ಬಹುತೇಕ ನದಿಗಳು ಅರಬ್ಬಿ ಸಮುದ್ರ ಸಂಪರ್ಕಿಸುವುದರಿಂದ ಇವುಗಳ ಹಿನ್ನೀರು ಕೂಡ ಬಹುಪಾಲು ಉಪ್ಪುನೀರಿನಿಂದ ಕೂಡಿದೆ. ಸಮುದ್ರದಲ್ಲಿದ್ದರೂ ಕುಡಿಯುವ ನೀರಿಗೆ ತತ್ವಾರ ಎಂಬಂತಾಗಿದೆ ಈ ಭಾಗದ ನಿವಾಸಿಗಳಿಗೆ. ಭೂಕೈಲಾಸ ಗೋಕರ್ಣ ರಾವಣ ಪ್ರತಿಷ್ಠಾಪಿತ ಆತ್ಮಲಿಂಗ ಕ್ಷೇತ್ರ. ಆಸ್ತಿಕವರ್ಗ ಒಂದುಕಡೆಯಾದರೆ ಇಲ್ಲಿನ ಓಂ ಕಡಲತೀರ, ಕುಡ್ಲೆ, ಪ್ಯಾರಾಡೈಸ್ , ಹಾಫ್ ಮೂನ್, ನಿರ್ವಾಣ ಬೀಚ್ ಗಳು ಅಂತರಾಷ್ಟ್ರೀಯ ಖ್ಯಾತಿ ಪಡೆದ ನೈಸರ್ಗಿಕಧಾಮಗಳು. ರಷ್ಯ, ಬ್ರೆಜಿಲ್, ಜರ್ಮನಿ, ಬಾಂಗ್ಲಾ, ನೇಪಾಳ, ಉಕ್ರೇನ್, ಶ್ರೀಲಂಕಾ, ಮಲೇಶಿಯಾ ಮೊದಲಾದ ದೇಶಗಳ ಪ್ರವಾಸಿಗರ ಸ್ವರ್ಗ.  ಮಿರ್ಜಾನ ಕೋಟೆ ಇತಿಹಾಸ  ಸಾಕ್ಷೀಕರಿಸುವ ಸ್ಮಾರಕ. ಯಾಣದ ಶಿಖರ ಪುರಾಣ ಮತ್ತು ನಿಸರ್ಗದ ಸಂಕೇತ.  ಇವೆಲ್ಲವೂ ಕರಾವಳಿಯ ಕುಮಟಾ ತಾಲೂಕಿನಲ್ಲಿ ಕಾಣಬರುವ ತಾಣಗಳು.ಸೃಷ್ಠಿಯ ವೈಪರಿತ್ಯಗಳ ಬೆನ್ನತ್ತುವ ಹಂಬಲದೊಂದಿಗೆ  ಪತ್ರಿಕೆಯ ಎರಡನೇ ಸಂಚಿಕೆ ತಮ್ಮ ಮುಂದಿಡುತ್ತಿದ್ದೇವೆ. ಓದಿ, ಪ್ರೋತ್ಸಾಹಿಸಿ ಎನ್ನುತ್ತಲೇ…..

              ಡಾ.ಶ್ರೀಧರ ಗೌಡ. ಉಪ್ಪಿನಗಣಪತಿ

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video

This site uses Akismet to reduce spam. Learn how your comment data is processed.