ಸಂಪಾದಕೀಯ – 15 ಅಗಸ್ಟ 2023
Art & Culture Current Affairs

ಸಂಪಾದಕೀಯ – 15 ಅಗಸ್ಟ 2023

ಹಾದೀಲೆ ಹೋಗೋರೆ, ಹಾಡೊಂದು ಕೇಳ್ಬೇಡಿ
ಹಾಡಲ್ಲ : ನನ್ನ ಎದೆ ಉರಿ
ದೇವರೆ, ಬೆವರಲ್ಲ ನನ್ನ ಕಣ್ಣೀರು.

ಜಾನಪದ ಕೋಗಿಲೆ ಪದ್ಮಶ್ರೀ ಪುರಷ್ಕೃತೆ ಹಾಲಕ್ಕಿ ಬುಡಕಟ್ಟು ಸಮುದಾಯದ ಸ್ವಾತಂತ್ರ್ಯಸಂಗ್ರಾಮದ ಕರ್ನಾಟಕದ ಬಾರ್ಡೋಲಿ ಅಂಕೋಲೆಯ ಬಡಗೇರಿಯ ನಾಡೋಜ ಶ್ರೀಮತಿ ಸುಕ್ರಿ ಬೊಮ್ಮ ಗೌಡರ ಬಾಯಿಂದ ಹಾಡಾದ ತ್ರಿಪದಿ ಸಾಲುಗಳು ಶ್ರಮಿಕ ಜನಪದರ ಬೆವರು. ಹುಡುಗಾಟಿಕೆ ಬುದ್ದಿಯ ಪುಂಡಾಟಿಕೆ ಹುಡುಗರು ಮತ್ತೆ ಮತ್ತೆ ಹಾಡು ಹಾಡು ಎಂದು ಪೀಡಿಸುವ ಪರಿ ಲೋಕಮಾನ್ಯವಾಗಿದೆ. ಅದರೆ ನಿಜರ್ಥದಲ್ಲಿ ಹಾಡಿನ ಸಾಹಿತ್ಯದ ಒಳಹೊಕ್ಕಿದಾಗ ಮಾತ್ರ ಶ್ರಮಿಕರ ನೋವು ಅನಾವರಣಗೊಳ್ಳುವುದು. ಇದು ಕೇವಲ ಸುಕ್ರಿ ಗೌಡರ ಎದೆಯ ನೋವಲ್ಲ. ಶ್ರಮಸಂಸ್ಕೃತಿಯ ಬದುಕಿನ ಜನಾಂಗದ ನೋವು. ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಅದೆಷ್ಟೋ ಸಮುದಾಯಗಳು ನಮ್ಮ ನಡುವೆ ಇವೆ. ಇವರ ನೋವು ನಲಿವುಗಳೆರೆಡೂ ಹಾಡಾಗಿ ಬಂದಿರುವುದು ಎದೆಯಾಳದಿಂದ. ಇಲ್ಲಿ ಕೃತಿಮತೆ ಇಲ್ಲ.

ಅದಕ್ಕೆ ದಾರ್ಶನಿಕರು ಹೇಳುವುದು ‘“ವಾಣಿ ಬೇರು, ಕವಿವಾಣಿ ಹೂವು’” ಮಾಧ್ಯಮದ ಸುದ್ಧಿಮನೆಯಲ್ಲಿ ಚರ್ಚಿತವಾಗುವ ಸುದ್ದಿಗಳೆಲ್ಲವೂ ಪ್ರಕಟವಾಗೇ ಬರುತ್ತವೆ ಎಂದರ್ಥವಲ್ಲ. ಮಾಧ್ಯಮಗಳು ಪ್ರಜಾಪ್ರಭುತ್ವದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಂತೆ ಕಾರ್ಯನಿರ್ವಹಿಸುತ್ತಿರುವ ನಾಲ್ಕನೇ ಅಂಗ. ಖಡ್ಗಕ್ಕಿಂತ ಲೇಖನಿ ಹರಿತ ಎನ್ನುವಂತೆ ಪತ್ರಿಕೆಯ ಸುದ್ದಿಗಳು ಪ್ರಕಟವಾಗುತ್ತವೆ. ಧನಾತ್ಮಕ ಸುದ್ದಿಗಳು ಒಂದುಕಡೆಯಾದರೆ ಸಮಾಜ ಕಂಟಕವಾಗಿರುವ ಸುದ್ದಿಗಳು ಸಮಾಜಘಾತುಕರನ್ನು ತಿವಿಯುವಂತೆ ಮಾಡುವಲ್ಲಿ, ಅವರ ಇನ್ನೊಂದು ಮುಖ ಸಮಾಜದ ಮುಖ್ಯವಾಹಿನಿಯಲ್ಲಿ ಅನಾವರಣಗೊಳಿಸುವಲ್ಲಿ ಆ ಮೂಲಕ ಸಾಮಾಜಿಕ ನ್ಯಾಯ ಸ್ಥಾಪಿತವಾಗುವುದರಲ್ಲಿ ಮಾಧ್ಯಮಗಳು ಹಗಲು ರಾತ್ರಿ ಕೆಲಸ ಮಾಡುತ್ತವೆ.

ಹಲವು ಸಲ ನಮಗೆ ಒಂದು ಅದ್ಬುತ ವಿಚಾರ ಮನಸ್ಸಿನಲ್ಲಿ ಬರುತ್ತದೆ. ನಮ್ಮ ವೃತ್ತಿಯನ್ನು ಇನ್ನೊಂದು ಮೇಲಿನ ಹಂತಕ್ಕೆ ಕೊಂಡೊಯ್ಯುವ ಯೋಚನೆ. ನಮ್ಮ ಬದುಕನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸುವ ಸಂಗತಿ. ನಮ್ಮನ್ನು ಸಂಪೂರ್ಣ ಎಚ್ಚರಗೊಂಡ ಹಾಗೆ ಮಾಡುವ ಸಮ್ಯಕ್ ಪ್ರಜ್ಞೆ ಇದಾಗಿರುತ್ತದೆ. ಕ್ಷಣಮಾತ್ರಕ್ಕೆ ತರ್ಕಕ್ಕೆ ನಿಲುಕದ ಧ್ವನಿ, ವಿಚಾರ, ಕಾಲ ಮೇಲಾಗಿ ನಮ್ಮ ನಿರೀಕ್ಷೆ, ನಮ್ಮ ಕಲ್ಪನೆಗಳು ತಿರುವು ಮುರುವು ಪಡೆದುಕೊಳ್ಳುತ್ತವೆ. ಅದು ಹೇಗೆಂದರೆ ಎವರೆಷ್ಟು ಏರುತ್ತಿದ್ದ ಪರ್ವತಾರೋಹಿ ಹಿಮಪಾತಕ್ಕೆ ಸಿಕ್ಕು ತನ್ನ ಅಸ್ತಿತ್ವ ಕಳೆದುಕೊಂಡ ಹಾಗೆ. ಮುಂಜಾಗೃತೆ ಅರಿತು ಕಾರ್ಯೋನ್ಮುಖರಾದರೆ ಅರಗಿನ ಮನೆಯಿಂದ ಪಾಂಡವರು ಹೊರಬಂದಂತೆ ಜೀವನ್ಮುಖಿಯಾಗಿ ಬದುಕು ಪರಿವರ್ತನೆಯಾಗಿಸಿಕೊಳ್ಳಲು ಸಾಧ್ಯವಾಗುತ್ತದೆ.

ಗೆಲ್ಲಬೇಕು ಎಂದು ಆಸೆ ಪಡುವುದು ತಪ್ಪಲ್ಲ. ಒಮ್ಮೆಯೂ ಸ್ಪರ್ಧೆಗೆ ಇಳಿಯದ ಕ್ರೀಡಾಳು ತನ್ನ ತಂಡವನ್ನು ಜಾಗತಿಕ ಮಟ್ಟಕ್ಕೆ ಒಯ್ಯಬೇಕು ಎಂದು ಬಯಸುವ. ಆದರೆ ಸೂಕ್ತ ತರಬೇತಿ ಮತ್ತು ಪ್ರಯತ್ನ ಮಾಡದೇ ಕ್ರೀಡೆಯಿಂದ ಅಂತರ ಕಾಯ್ದುಕೊಂಡು ಗೆಲ್ಲುವ ಕನಸು ಕಾಣುವುದು ಎಂದರೆ ? ನಮ್ಮ ಜೀವನದಲ್ಲಿ ಯಾವುದೇ ಹಂತದಲ್ಲಿ ಹೊಸದನ್ನು ಆರಂಭಿಸುವಾಗ ಅದಕ್ಕೆ ಪ್ರತಿರೋಧ ಉಂಟಾದಾಗ ಹಿಂಜರಿಯುವಿಕೆ ಸಲ್ಲದು. ಸಮಸ್ಯೆಗಳು ಸಂಭವಿಸಿದಾಗ ಸಮಸ್ಯೆಗಳ ಮೂಲ ಹುಡುಕಬೇಕೇ ಹೊರತು ವಿಮುಖರಾಗುವುದಲ್ಲ. ಗಿಡವನ್ನು ಕಿತ್ತು ಬೇರೆಡೆ ನೆಡುವ ಉದ್ದೇಶವಿದ್ದರೆ ಅದರ ಬೇರು ಹುಡುಕಿ ಕೀಳಬೇಕು. ಕರಾವಳಿ ಸಾಂಪ್ರದಾಯಿಕ ಕಲೆಗಳ ಆಗರ. ಸುಗ್ಗಿ ಕುಣಿತ, ಗುಮಟೆಪಾಂಗ, ಭೂತಕೋಲ, ಪುಗಡಿ, ಕೋಲಾಟ, ಮರಕಾಲಕುಣಿತ, ವಾದ್ಯ, ಯಕ್ಷಗಾನ, ಸಂಗ್ಯಾಬಾಳ್ಯಾ, ಗುಂಡುಭರ್ಮ ಸಣ್ಣಾಟಗಳು ಇಲ್ಲಿನ ಕಲೆಗಳನ್ನು ಮೇಳೈಸಿವೆ. ವೈವಿಧ್ಯಮಯವಾಗಿರುವ ಕರಾವಳಿಯಲ್ಲಿ ಸುದ್ದಿಗೆ ಬರಗಾಲವಿಲ್ಲ. ರಾಷ್ಟ್ರಕವಿ ಗೋವಿಂದ ಪೈ, ಕಯ್ಯಾರ ಕಿಙ್ಙಞ್ಞ ರೈ, ಪುರುಷೋತ್ತಮ ಬಿಳಿಮಲೆ, ವಿವೇಕ ರೈ, ಚಿನ್ನಪ್ಪ ಗೌಡ, ಅಮೃತ ಸೋಮೇಶ್ವರ, ಗೌರೀಶ ಕಾಯ್ಕಣಿ, ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ಜಿ.ಎಚ್.ನಾಯಕ, ಜಯಂತ ಕಾಯ್ಕಣಿ, ವಿಷ್ಣು ನಾಯ್ಕ, ಸೈಯದ್ ಝಮೀರುಲ್ಲಾ ಷರೀಫ್, ಶ್ರೀಧರ ಬಳಗಾರ ಮೊದಲಾದ ಸಾಹಿತಿಗಳ ತವರು ಕರಾವಳಿ ತೀರ.

ಹೇಳಲು ಹೊರಟಿದ್ದು ಬಹಳಷ್ಟಾದರೂ ಹೇಳಿದ್ದು ಮಾತ್ರ ಸಾಸಿವೆ ಕಾಳಿನಷ್ಟು. “ನಮಸ್ತೆ ಕರಾವಳಿ” ಪಾಕ್ಷಿಕ ಪತ್ರಿಕೆ ಸ್ವತಂತ್ರವಾಗಿ ಮಾಧ್ಯಮ ರಂಗಕ್ಕೆ ಪರಿಚಯಿಸುತ್ತಿರುವ ಈ ಸಂದರ್ಭ ಕೆಂಪುಹಾಸಿನ ನೆಲ ಎಂಬುದನ್ನು ಕನಸಿನಲ್ಲೂ ಊಹಿಸಿಕೊಂಡವನಲ್ಲ. ಮುಳ್ಳಿನ ಹಾಸಿಗೆ ಮೇಲೆ ಸಾಗುವ ದಾರಿ ಎಂಬುದನ್ನು ಅರಿತಿರುವೆ. ಅಂಬೆಗಾಲಡುತ್ತಲೇ ಸಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿ ಜೀವನಕ್ಕೆ ಇದ್ದ ಸರಕಾರಿ ನೌಕರಿಯನ್ನು ತ್ಯಜಿಸಿ ಪತ್ರಿಕಾರಂಗದ ಮೇಲೆ ಹೆಜ್ಜೆ ಮೂಡಿಸಲು ಸಾಗುವ ಪಯಣಿಗನಾಗಿದ್ದೇನೆ. ನನ್ನ ಮನದ ಬಯಕೆಗೆ ಪ್ರೋತ್ಸಾಹಿಸಿ ಪತ್ರಿಕೆಯನ್ನು ಹೊರತರಲು ಮುಂದಾದ ಆತ್ಮೀಯರು, ಹಿತೈಷಿಗಳು, ಸಮಜಾಮುಖಿಯಾಗಿ ಗುರುತಿಸಿಕೊಂಡವರು ಆದ ಗೋವಿಂದ ಗೌಡರವರು. ಇನ್ನು ನಿಮ್ಮ ಕೈಯಲ್ಲಿರುವ ಪತ್ರಿಕೆಯನ್ನು ಓದಿ ಪ್ರೋತ್ಸಾಹಿಸುವ ದೊಡ್ಡ ಮನಸ್ಸು ಓದುಗರಾದ ನೀವು ಮಾಡಬೇಕು. ಖಂಡಿತಾ ಪ್ರೋತ್ಸಾಹಿಸುತ್ತೀರಿ ಎಂಬ ಭರವಸೆಯೊಂದಿಗೆ.

ಡಾ.ಶ್ರೀಧರ ಗೌಡ. ಉಪ್ಪಿನಗಣಪತಿ
ಸಂಪಾದಕರು
ಮೊಬೈಲ್ : +91 8310764316
ಇಮೇಲ್: shridhar@namastekaravali.com

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video

This site uses Akismet to reduce spam. Learn how your comment data is processed.