ಆದಿತ್ಯ L1 ಯಶಸ್ವಿ ಉಡಾವಣೆ
ಚಂದ್ರಯಾನ -2 ರ ಸೋಲನ್ನು ವಿಫಲತೆ ಸರಿಪಡಿಸುವ ಗುರಿಯಾಗಿಸಿಕೊಂಡು ಕಾರ್ಯಕ್ಕಿಳಿದ ಇಸ್ರೋ ಈಗ ಮುಟ್ಟಿದ್ದೆಲ್ಲ ಚಿನ್ನ ಎಂಬಂತಾಗಿದೆ. ಹೌದು, ಚಂದ್ರಯಾನ -3 ಯಶಸ್ಸಿನ ನಂತರ ಇಡೀ ಭಾರತದ ಸೂರ್ಯನೆಡೆಗೆ ಶಿಕಾರಿಗೆ ಹೊರಟಿದೆ. ಈಗಾಗಲೇ ಚಂದ್ರನಂಗಳದಲ್ಲಿ ಏನೆಲ್ಲಾ ಇದೆ ಎಂಬ ಮಾಹಿತಿಯನ್ನು ಪ್ರಜ್ಞಾನ್ ರೋವರ್ ಮೂಲಕ ಭಾರತ ತಿಳಿದುಕೊಳ್ಳುತ್ತಿದೆ. ಈ ನಡುವೆ ಈಗ ಆದಿತ್ಯ L1 ಯಶಸ್ವಿಯಾಗಿ ಲಾಂಚ್ ಆಗಿದೆ. ಈ ಮೂಲಕ ಭಾರತದ ಶಕ್ತಿ ಕಂಡು ಇತರೆ ರಾಷ್ಟ್ರಗಳು ಅಚ್ಚರಿಗೆ ಒಳಗಾಗಿವೆ.
ಈಗಾಗಲೇ ಚಂದ್ರನ ಮೇಲೆ ಅಮೆರಿಕ , ಚೀನಾ, ರಷ್ಯಾ ರಾಷ್ಟ್ರಗಳು ಅಧ್ಯಯನ ಮಾಡಿವೆ. ಅದರಲ್ಲೂ ಮಾನವರು ವಾಸಿಸಲು ಯೋಗ್ಯವೇ ಎಂಬುದರ ಬಗ್ಗೆ ಇನ್ನಷ್ಟು ಅಧ್ಯಯನಗಳು ಸಹ ನಡೆಯುತ್ತಿವೆ. ಆದರೆ, ಈಗ ಭುವಿಯಿಂದ ಗಗನಕ್ಕೆ ಆದಿತ್ಯ L1 ಜಿಗಿದಿದ್ದು, ಈ ಮೂಲಕ ಸೂರ್ಯನ ಬಗ್ಗೆ ಇಡೀ ಜಗತ್ತಿಗೆ ಇನ್ನಷ್ಟು ಮಾಹಿತಿ ನೀಡಲು ಮುಂದಾಗಿದೆ. ಒಂದು ಕಾಲದಲ್ಲಿ ತಂತ್ರಜ್ಞಾನಕ್ಕಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದ್ದ ಭಾರತ ಇಂದು ಸ್ವತಂತ್ರವಾಗಿ ನಗೋ ಮಂಡಲಕ್ಕೆ ರಾಕೆಟ್ ಗಳನ್ನು ಹಾರಿಬಿಡುವುದರ ಮೂಲಕ ಮೈಲಿಗಲ್ಲು ಸಾಧಿಸಿದೆ.
ಆದಿತ್ಯ L1 ಅನ್ನು ಸೂರ್ಯನನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾದ ಉಪಗ್ರಹವಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಇತರ ಭಾರತೀಯ ಸಂಶೋಧನಾ ಸಂಸ್ಥೆಗಳು ಇದನ್ನು ಅಭಿವೃದ್ಧಿಪಡಿಸಿವೆ. ಅದರಲ್ಲೂ ಸೂರ್ಯನನ್ನು ವೀಕ್ಷಿಸಲು ಮೀಸಲಾದ ಮೊದಲ ಭಾರತೀಯ ಮಿಷನ್ ಇದಾಗಿದೆ. ಈ ಮೂಲಕ ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ಸೂರ್ಯ-ಭೂಮಿಯ ವ್ಯವಸ್ಥೆಯ ಲಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಕೆಲಸ ಮಾಡುತ್ತದೆ.
ಈ ಉಪಗ್ರಹವು ಸೌರ ವಾತಾವರಣ, ಸೌರ ಕಾಂತೀಯ ಬಿರುಗಾಳಿಗಳು ಮತ್ತು ಭೂಮಿಯ ಸುತ್ತಲಿನ ಪರಿಸರದ ಮೇಲೆ ಅವುಗಳ ಪ್ರಭಾವವನ್ನು ಅಧ್ಯಯನ ಮಾಡುತ್ತದೆ.
ಇದು ಅನಿಲ ಮಾದರಿ, ಕರೋನಲ್ ತಾಪನ ಮತ್ತು ಸೌರ ಮಾರುತದ ವೇಗವರ್ಧನೆಯನ್ನು ಸಹ ಅಧ್ಯಯನ ಮಾಡುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ. ಜೊತೆಗೆ ಈ ಉಪಗ್ರಹವು ಏಳು ವಿಭಿನ್ನ ಪೇಲೋಡ್‌ಗಳನ್ನು ಹೊಂದಿದ್ದು, ಇದರಲ್ಲಿ ಐದು ಪೇಲೋಡ್‌ಗಳನ್ನು ಇಸ್ರೋ ಅಭಿವೃದ್ಧಿಪಡಿಸಿದೆ. ಮತ್ತೆರಡನ್ನು ಇಸ್ರೋ ಮತ್ತು ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಪೇಲೋಡ್‌ಗಳು ಯುವಿ ಮತ್ತು ಎಕ್ಸ್-ರೇ ಪೇಲೋಡ್‌ಗಳನ್ನು ಒಳಗೊಂಡಿವೆ.ಚಂದ್ರನ ಮೇಲೆ ರೋವರ್ ಅನ್ನು ಇಳಿಸಲಾಗಿದೆ. ಅದು ತನ್ನ ಕೆಲಸವನ್ನು ಆರಂಭ ಮಾಡಿದ್ದು, ಅಲ್ಲಿ ಏನೆಲ್ಲಾ ಅಂಶಗಳಿವೆಯೋ ಅದನ್ನು ಭೂಮಿಗೆ ಮಾಹಿತಿ ನೀಡುತ್ತಿದೆ. ಹಾಗಂತ ಈ ಆದಿತ್ಯ L1 ಸಹ ಸೂರ್ಯನ ಮೇಲೆ ಇಳಿಯಲಿದೆ ಎಂದು ನೀವಂದುಕೊಂಡರೆ ಅದು ತಪ್ಪು ಕಲ್ಪನೆಯಾಗುತ್ತದೆ. ಯಾಕೆಂದರೆ ಆದಿತ್ಯ-L1 ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಸೂರ್ಯನನ್ನು ಸಮೀಪಿಸುವುದೂ ಇಲ್ಲ.
ಇದು ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿ ಇದ್ದುಕೊಂಡು ಸೂರ್ಯನನ್ನು ವೀಕ್ಷಣೆ ಮಾಡುವ ಮೂಲಕ ಮಾಹಿತಿ ಕಲೆ ಹಾಕುತ್ತದೆ. ಇನ್ನು 1.5 ಮಿಲಿಯನ್ ಕಿಮೀ ಅಂದರೆ ಭೂಮಿ-ಸೂರ್ಯನ ದೂರದ ಸುಮಾರು 1% ಮಾತ್ರ ಆಗಿದೆ. ಹಾಗೆಯೆ ಈ ಆದಿತ್ಯ L1 ತನ್ನ ಗೊತ್ತುಪಡಿಸಿದ ಸ್ಥಳವನ್ನು ತಲುಪಲು ಚಂದ್ರಯಾನ-3 ರೀತಿಯಲ್ಲೇ ಕೆಲವು ಹಂತಗಳನ್ನು ತೆಗೆದುಕೊಳ್ಳುತ್ತದೆ.ಅಂದರೆ ಈ ಉಪಗ್ರಹ 16 ದಿನಗಳ ಕಾಲ ಭೂಮಿಗೆ ಸುತ್ತುವ ಕಕ್ಷೆಯಲ್ಲಿ ಉಳಿಯುತ್ತದೆ. ಇದಾದ ನಂತರ ಜಿಗಿತಕ್ಕೆ ಬೇಕಾದ ವೇಗವನ್ನು ಪಡೆಯಲು ಐದು ಕುಶಲತೆಗಳಿಗೆ ಒಳಗಾಗುತ್ತದೆ. ಆದಿತ್ಯ L1 ಸೌರ ಮಿಷನ್ ಭೂಮಿಯಿಂದ ನಿಗದಿತ ಸಮಯ ತಲುಪಲು ಸುಮಾರು ನಾಲ್ಕು ತಿಂಗಳುಗಳು ತೆಗೆದುಕೊಳ್ಳುತ್ತದೆ ಎಂದು ಇಸ್ರೋ ಅಂದಾಜಿಸಿದೆ.
ಆದಿತ್ಯ L1 ಮಿಷನ್ ಏನೆಲ್ಲಾ ಮಾಡಲಿದೆ: ಸೌರ ಮೇಲಿನ ವಾತಾವರಣದ (ಕ್ರೋಮೋಸ್ಫಿಯರ್ ಮತ್ತು ಕರೋನಾ) ಡೈನಾಮಿಕ್ಸ್ ಅಧ್ಯಯನ ಮಾಡಲಿದೆ, ಇದರೊಂದಿಗೆ ಕ್ರೋಮೋಸ್ಪಿರಿಕ್ ಮತ್ತು ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಎಜೆಕ್ಷನ್‌ಗಳ ಪ್ರಾರಂಭ ಮತ್ತು ಜ್ವಾಲೆಗಳ ಅಧ್ಯಯನ, ಸೌರ ಕರೋನದ ಭೌತಶಾಸ್ತ್ರ ಮತ್ತು ಅದರ ತಾಪನ ಕಾರ್ಯವಿಧಾನ, ಕರೋನಲ್ ಲೂಪ್ ಪ್ಲಾಸ್ಮಾದ ತಾಪಮಾನ, ವೇಗ ಮತ್ತು ಸಾಂದ್ರತೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಕಲೆ ಹಾಕುವ ಕೆಲಸ ಮಾಡುತ್ತದೆ. ಈ ಸಂಬಂಧ ಮಾಹಿತಿ ನೀಡಿರುವ ಪ್ರೊಫೆಸರ್ ಆರ್‌ಸಿ ಕಪೂರ್, ಆದಿತ್ಯ L1 ಮಿಷನ್ ಉಡಾವಣೆಯ ಪ್ರಮುಖ ಸಾಧನವು ಸೂರ್ಯನ ಕರೋನಾವನ್ನು ಅಧ್ಯಯನ ಮಾಡುತ್ತದೆ. ಸಾಮಾನ್ಯವಾಗಿ ಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ಇದನ್ನು ಅಧ್ಯಯನ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಈ ಮಿಷನ್ ಕುರಿತು ಮಾಜಿ ಇಸ್ರೋ ವಿಜ್ಞಾನಿ ಮೈಲ್ಸ್ವಾಮಿ ಅಣ್ಣಾದೊರೈ ಮಾತನಾಡಿ, ಇದು ಐದು ವರ್ಷಗಳ ಕಾಲ ಅತ್ಯಂತ ನಿಖರವಾದ ಮಾಹಿತಿ ಪತ್ತೆ ಮಾಡುವ ಕೆಲಸ ಮಾಡಲಿದೆ. ಜೊತೆಗೆ ಇದು ತಾಂತ್ರಿಕವಾಗಿ ತುಂಬಾ ಸವಾಲಿನ ಸಂಗತಿಯಾಗಿದೆ. ಆದರೆ, ವೈಜ್ಞಾನಿಕವಾಗಿ ಲಾಭದಾಯಕವಾಗಲಿದೆ ವಿಜ್ಞಾನಿಗಳ ತರ್ಕ.
ಚಂದ್ರ, ಮಂಗಳ ಮತ್ತು ಸೂರ್ಯ ಆಯ್ತು… ಈಗ ಇಸ್ರೋ ಕಣ್ಣು ಶುಕ್ರನತ್ತ…. ಇದೊಂದು ಭಾರತದ ಪುಟದಲ್ಲಿ ಮೈಲಿಗಲ್ಲು.
Leave feedback about this