ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಮತ್ತು ಅವರ ತಂಡ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ತಣ್ಣೀರುಕುಳಿ ಗ್ರಾಮದಲ್ಲಿ ಸಂಚರಿಸಿ ಹಾಲಕ್ಕಿಗಳ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಿತು. ಹಾಲಕ್ಕಿ ಒಕ್ಕಲು ಸಮುದಾಯ ಜಿಲ್ಲೆಯ ಮೂಲ ನಿವಾಸಿಗಳಾಗಿದ್ದು ಚಂದಾವರ, ಹರೀಟ, ನುಸಿಕೋಟೆ, ಗೋಕರ್ಣ, ಕುಂಬಾರಗದ್ದೆ, ಅಂಕೋಲ ಮತ್ತು ಕಡವಾಡ ಸೀಮೆ ವ್ಯಾಪ್ತಿಯಲ್ಲಿ ಒಳ ಆಡಳಿತ ವ್ಯವಸ್ಥೆಯಡಿ ಕಾಳಿ ನದಿ ಮತ್ತು ಶರಾವತಿ ನದಿ ಮಧ್ಯೆ ಬದುಕು ಕಟ್ಟಿಕೊಂಡಿರುವ ಬುಡಕಟ್ಟು ಸಂಸ್ಕೃತಿ ಹೊಂದಿರುವ ಆದಿವಾಸಿ ಜನಾಂಗ ಇಂದಿಗೂ ಬುಡಕಟ್ಟು ಸಂಸ್ಕೃತಿ ಉಳಿಸಿಕೊಂಡಿದೆ. ಸ್ವಾತಂತ್ರ್ಯ ಬಂದು 75 ವರ್ಷ ಸಂದರೂ ಹಾಲಕ್ಕಿಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಬದಲಾಗಿಲ್ಲ. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಇಂದಿಗೂ ಕೂಡ ಕೊಪ್ಪಗಳಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುತ್ತಾರೆ. ಹಾಲಕ್ಕಿ ಒಕ್ಕಲು ಸಮಾಜ ರಾಜ್ಯ ಸರ್ಕಾರದ ಗ್ರೂಪ್ ಒಂದರ ಮೀಸಲಾತಿಯಲ್ಲಿ ಗುರುತಿಸಲ್ಪಟ್ಟಿದ್ದು, ಆದರೆ ಈ ಗುಂಪಿನಲ್ಲಿ ಬಲಾಢ್ಯ ಸಮುದಾಯಗಳಿದ್ದು ಅವರೊಂದಿಗೆ ಸ್ಪರ್ಧಿಸಲು ಈ ಸಮಾಜಕ್ಕೆ ಸಾಧ್ಯವಾಗದ ಕಾರಣ ಶೈಕ್ಷಣಿಕ ಔದ್ಯೋಗಿಕ ಮೀಸಲಾತಿ ಪಡೆಯಲು ಕೂಡ ಕಷ್ಟ ಸಾಧ್ಯವಾಗಿದೆ ಎಂದು ಶ್ರೀಧರ ಗೌಡ ವಸ್ತುಸ್ಥಿತಿ ವಿವರಿಸಿದರು.
ಈ ಕಾರಣಕ್ಕಾಗಿ ಹಾಲಕ್ಕಿ ಒಕ್ಕಲು ಸಮಾಜದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಅಡಿ 50 ಕೋಟಿ ರೂ ಅನುದಾನ ನೀಡುವಂತೆ ಹಾಲಕ್ಕಿ ಒಕ್ಕಲಿಗರ ಸಂಘದ ಮೂಲಕ ಮನವಿ ಸಲ್ಲಿಸಲಾಯಿತು. ಅದರಂತೆ ಹಾಲಕ್ಕಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಶಿಷ್ಯವೇತನ, ಪಹಣಿ ಪತ್ರ ದುರಸ್ತಿ, ಊರ ಗೌಡರಿಗೆ ಮಾಸಾಸನ ನೀಡುವಂತೆ ಹಾಲಕ್ಕಿ ಯೂತ್ ಕ್ಲಬ್ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಯೋಗದಲ್ಲಿ ಸದಸ್ಯರುಗಳು ಬಿ ಸಿ ಎಂ ಜಿಲ್ಲೆ ಹಾಗೂ ತಾಲೂಕು ಅಧಿಕಾರಿಗಳು ಮತ್ತು ತಹಸಿಲ್ದಾರ್ ಸೇರಿದಂತೆ ಕಂದಾಯದ ಇಲಾಖೆ ಅಧಿಕಾರಿಗಳು, ಹಾಲಕ್ಕಿ ಒಕ್ಕಲಿಗರ ಸಂಘದ ಕೃಷ್ಣ ಗೌಡ ಬೆಳ್ಳೆ, ಮಾರುತಿ ಗೌಡ ಪದಾಧಿಕಾರಿಗಳು ಮತ್ತು ಹಾಲಕ್ಕಿ ಯೂಥ್ ಕ್ಲಬ್ ನ ಅಧ್ಯಕ್ಷ ವಿನಾಯಕ ಗೌಡ, ಈಶ್ವರ್ ಗೌಡ ಪದಾಧಿಕಾರಿಗಳು ಹಾಗೂ ತಣ್ಣೀರು ಕುಳಿ ಗ್ರಾಮದ ಪ್ರಮುಖ ರಾದ ಮಾಬ್ಲು ಗೌಡ, ಗಣಪತಿ ಗೌಡ, ಶಿವು ಗೌಡ, ಭವಾನಿ ಗೌಡ ಸೇರಿದಂತೆ ಗ್ರಾಮಸ್ಥರು ಮನವಿ ಸಲ್ಲಿಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು
Leave feedback about this