ಬೆಂಗಳೂರು: ಶಕ್ತಿಭವನದಲ್ಲಿ ಇಂದು ಮುಖ್ಯಮಂತ್ರಿಗಳಾದ ಮಾನ್ಯ ಸಿದ್ಧರಾಮಯ್ಯನವರು ಕರೆದಿದ್ದ ಮಂಡ್ಯದಲ್ಲಿನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನವ ಪೂರ್ವಭಾವಿ ಸಭೆಯಲ್ಲಿ ಇದೇ ವರ್ಷದ ಜೂನ್ 7,8 ಮತ್ತು 9ರ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಯಿತು. ಆ ಸಮಯದಲ್ಲಿ ಲೋಕಸಭಾ ಚುನಾವಣೆಗಳು ಮುಗಿದಿದ್ದು ನೀತಿ ಸಂಹಿತೆಯ ತಡೆ ಇರುವುದಿಲ್ಲ, ಶಾಲೆಗಳೂ ಕೂಡ ಆರಂಭವಾಗಿರುತ್ತವೆ, ಮಳೆಗಾಲ ಇನ್ನೂ ಆರಂಭವಾಗಿರುವುದಿಲ್ಲ ಮೊದಲಾದ ಅನೇಕ ಅಂಶಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಜೂನ್ನಲ್ಲಿಯೇ ಸಾಹಿತ್ಯ ಸಮ್ಮೇಳನ ನಡೆಯುವುದು ಸೂಕ್ತ ಎಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಈ ಹಿಂದೆ ಆರು ಸಮ್ಮೇಳನಗಳು ಜೂನ ನಲ್ಲಿಯೇ ನಡೆದ ಸಂಪೂರ್ಣ ವಿವರಗಳನ್ನು ನೀಡಿದರು. ಇದನ್ನು ಒಪ್ಪಿದ ಮುಖ್ಯಮಂತ್ರಿಗಳು ದಿನಾಂಕದ ಕುರಿತು ಸಮ್ಮತಿಯನ್ನು ಸೂಚಿಸಿದರು.
ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಮಂಡ್ಯ ಉಸ್ತುವಾರಿ ಸಚಿವರಾದ ಚಲುವರಾಯ ಸ್ವಾಮಿ, ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ, ಮಂಡ್ಯ ಜಿಲ್ಲೆಯ ವಿಧಾನ ಸಭಾ ಸದಸ್ಯರಾದ ಪಿ.ಎಂ.ನರೇಂದ್ರ ಸ್ವಾಮಿ, ರವಿಕುಮಾರ ಗೌಡ ಮತ್ತು ವಿಧಾನ ಪರಿಷತ್ ಸದಸ್ಯರಾದ ಮಧು.ಜಿ.ಮಾದೆಗೌಡ, ದಿನೇಶ್ ಗೂಳಿಗೌಡ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಮಂಜುಳಾ, ನಿರ್ದೇಶಕರಾದ ಡಾ.ಧರಣಿದೇವಿ ಮಾಲಗಿತ್ತಿ, ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಕುಮಾರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಷೇಕ್ ತನ್ವೀರ್ ಅಸಿಫ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಮತ್ತು ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು. ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಐತಿಹಾಸಿಕ ಎನ್ನುವಂತೆ ಜರುಗಿ ಯಶಸ್ವಿಯಾಗಿದೆ ಸಮ್ಮೇಳನದ ಯಶಸ್ಸಿಗೆ ಇದೇ ಮಾನದಂಡವಾಗಿದ್ದು, ಇದೇ ಮಾದರಿಯ ಅಥವಾ ಇದಕ್ಕಿಂತಲೂ ಯಶಸ್ವಿಯಾದ ಸಮ್ಮೇಳನವನ್ನು ಜನರು ನಿರೀಕ್ಷೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು 30.00 ( ಮೂವತ್ತು ಕೋಟಿ) ಕೋಟಿ ರೂಪಾಯಿಗಳ ಅನುದಾನವನ್ನು ಸಾಹಿತ್ಯ ಸಮ್ಮೇಳನಕ್ಕೆ ಆಯವ್ಯಯದಲ್ಲಿ ಒದಗಿಸ ಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಿನಂತಿಸಿದರು. ಇದಕ್ಕೆ ಮಂಡ್ಯ ಉಸ್ತುವಾರಿ ಸಚಿವರಾದ ಚಲುವರಾಯ ಸ್ವಾಮಿ, ಕನ್ನಡ ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ ಮತ್ತು ಮಂಡ್ಯದ ಎಲ್ಲಾ ಶಾಸಕರು ಸಂಪೂರ್ಣ ಬೆಂಬಲ ಸೂಚಿಸಿದ್ದು ಮುಖ್ಯಮಂತ್ರಿಗಳು ಒಪ್ಪಿಗೆಯನ್ನು ಸೂಚಿಸಿದರು. ಕಳೆದ ಸಲದ ಹಾವೇರಿ ಸಮ್ಮೇಳನದ ಸಂದರ್ಭದಲ್ಲಿ ಕನ್ನಡ ರಥವು ನಾಡಿನೆಲ್ಲೆಡೆ ಸಂಚರಿಸಿ ಸಮ್ಮೇಳನಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಿದ್ದನ್ನು ನಾಡೋಜ ಡಾ.ಮಹೇಶ ಜೋಶಿಯವರು ಪ್ರಸ್ತಾಪಿಸಿದಾಗ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಸಮ್ಮೇಳನದಲ್ಲಿಯೂ ಈ ಪರಂಪರೆಯನ್ನು ಮುಂದುವರೆಸಲು ಒಪ್ಪಿಗೆಯನ್ನು ಸೂಚಿಸಿದರು.
ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನವು ಮೂವತ್ತು ವರ್ಷಗಳ (1994) ನಂತರ ಅಯೋಜಿತವಾಗಿದ್ದು ಜನರು ಇದರ ಕುರಿತು ಅಪಾರ ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದಾರೆ ಮಂಡ್ಯದಲ್ಲಿ ಕರ್ನಾಟಕ ನಾಮಕರಣವಾದ ನಂತರ ಮೊದಲ ಸಾಹಿತ್ಯ ಸಮ್ಮೇಳನವು 1974ರಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ನಾಮಕರಣದ ನಂತರ ಅಂದಿನ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರು ವಿಸ್ತೃತವಾಗಿ ನಾಡಿನ ನಾಮಕರಣದ ಆಶಯಗಳ ಕುರಿತು ಮಾತನಾಡಿದ್ದು ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿಯೇ. ಈಗ ನಾಮಕರಣದ ಸುವರ್ಣ ಮಹೋತ್ಸವವು ಜರಗುತ್ತಿತ್ತು. ಸಾಹಿತ್ಯ ಸಮ್ಮೇಳನದಲ್ಲಿ ಇದರ ಕುರಿತು ವಿಶೇಷ ಕಾರ್ಯಕ್ರಮಗಳು ನಡೆಯ ಬೇಕಾಗಿದ್ದು ಅಗತ್ಯವಾಗಿದೆ ಎನ್ನುವ ಅಂಶಗಳನ್ನು ನಾಡೋಜ ಡಾ.ಮಹೇಶ ಜೋಶಿಯವರು ಸಭೆಯ ಗಮನಕ್ಕೆ ತಂದರು. ಜಿಲ್ಲಾಡಳಿತವನ್ನು ಸಂಬಂಧ ಪಟ್ಟವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ‘ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸುವಂತೆ’ ಮುಖ್ಯಮಂತ್ರಿಗಳು ಸೂಚಿಸಿದರು. ಗೋಷ್ಟಿಗಳನ್ನು ಅರ್ಥಪೂರ್ಣವಾಗಿ ನಡೆಸುವುದರ ಜೊತೆಗೆ ಅನುಷ್ಟಾನಕ್ಕೆ ತರಲು ಅರ್ಹವಾದ ನಿರ್ಣಯಗಳನ್ನು ಅಂಗೀಕರಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಧೂಳು ರಹಿತವಾಗಿ, ಪ್ಲಾಸ್ಟಿಕ್ ಮುಕ್ತವಾಗಿ ಜರ್ಮನ್ ಟೆಂಟ್ನೊಂ ದಿಗೆ, ವ್ಯವಸ್ಥಿತವಾಗಿ, ಶಿಸ್ತು-ಸಮಯ ಪ್ರಜ್ಞೆಯಿಂದ ಕೂಡಿ ಶುಚಿ-ರುಚಿಯಾದ ಆಹಾರದಿಂದ ಎಲ್ಲರನ್ನೂ ಆಕರ್ಷಿಸಿದ್ದನ್ನು ನಾಡೋಜ ಡಾ.ಮಹೇಶ ಜೋಶಿಯವರು ಪ್ರಸ್ತಾಪಿಸಿದಾಗ ಮಂಡ್ಯದಲ್ಲಿ ನಡೆಯುವ ಸಮ್ಮೇಳನ ಕೂಡ ಇದೇ ರೀತಿಯಲ್ಲಿ ವ್ಯವಸ್ಥಿತಿವಾಗಿ ನಡೆದು ಹೊಸ ಮಾನದಂಡವನ್ನು ರೂಪಿಸುವಂತಿರಲಿ ಕರ್ನಾಟಕ ಸರ್ಕಾರವು ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ, ಸಹಕಾರ, ಸಹಯೋಗವನ್ನು ನೀಡಲಿದೆ ಎಂದು ಮುಖ್ಯಮಂತ್ರಿಗಳು ಭರವಸೆಯನ್ನು ನೀಡಿದರು.
ಸಭೆಯಲ್ಲಿ ಹಾಜರಿದ್ದ ವರೆಲ್ಲರೂ ಸಂಪೂರ್ಣ ಸಹಕಾರ ನೀಡುವ ಮಾತನ್ನಾಡಿರುವುದರಿಂದ ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗುವೆಡೆ ಮಹತ್ವದ ಹೆಜ್ಜೆ ಇಟ್ಟಂತಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.