ಶಿರಸಿ ; ಉತ್ತರ ಕನ್ನಡ ಜಿಲ್ಲಾ 24 ನೇ ಕನ್ನಡ ಸಾಹಿತ್ಯ ಸಮ್ಮೇಳನ ಶಿರಸಿಯ ರಂಗಧಾಮದ ನೆಮ್ಮದಿ ಆವರಣದಲ್ಲಿ ಡಿಸೆಂಬರ್ 3 ಮತ್ತು 4 ರಂದು ನಡೆಯಲಿದೆ. ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎನ್.ವಾಸರೆ ಮತ್ತು ಸ್ವಾಗತಿ ಸಮಿತಿ ಸಾಕಷ್ಟು ತಯಾರಿ, ಪೂರ್ವ ಸಿದ್ಧತೆಗಳು ಮಾಡಿಕೊಂಡಿದ್ದು ಆಮಂತ್ರಣ ಪತ್ರಿಕೆ ಕೂಡ ಬಿಡುಗಡೆಯಾಗಿದೆ.
ಸಾಹಿತಿ ಆರ್.ಡಿ.ಹೆಗಡೆ ಆಲ್ಮನೆ ರವರ ಸರ್ವಾಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನ ಮೊದಲ ದಿನ ಮುಂಜಾನೆ ಧ್ವಜಾರೋಹಣ ದಿಂದ ಪ್ರಾರಂಭವಾಗಿ, ಮಾರಿಕಾಂಬ ದೇವಸ್ಥಾನದಿಂದ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಹೊರಟು, ಸೋದೆ ರಾಮಚಂದ್ರ ನಾಯಕ್ ಆವರಣದಲ್ಲಿ ಪರಿಸಮಾಪ್ತಿ ಗೊಳ್ಳಲಿದೆ. ವಿಷ್ಣು ನಾಯ್ಕ ವೇದಿಕೆಯಲ್ಲಿ ಸಮ್ಮೇಳನ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಲಿದೆ. ಈ ಸಂದರ್ಭದಲ್ಲಿ ಭಾಗೀರಥಿ ಹೆಗಡೆಯವರ ಶೋಕಚಕ್ರ, ಕೃಷ್ಣ ಪದಕಿಯವರ ಭರವಸೆಯ ಬೆಳಕು, ಭೀಮಾಶಂಕರ ಅಜನಾಳರವರ ಹಳ್ಳಿಯ ಹೊಲ್ದಾಗ, ನಾಗಪ್ಪ ಬಿ. ರವರ ನೆತ್ತರಲಿ ನೆಂದ ಹೂವು, ನಾಗರತ್ನ ನಾಯ್ಕ ರವರ ಕನಸು, ಈ ಐದು ಕವನ ಸಂಕಲನಗಳು ಹಾಗೂ ರಾಜು ಅಡಕಳ್ಳಿಯವರ ಹರಟೆ ಕಷಾಯ ಪುಸ್ತಕಗಳು ಬಿಡುಗಡೆಯಾಗಲಿವೆ.
ನಂತರದಲ್ಲಿ ಸಾಹಿತ್ಯ ಸಮ್ಮೇಳನದ ಬಹು ಮುಖ್ಯ ಭಾಗ ಗೋಷ್ಠಿಗಳು ನಡೆಯಲಿವೆ.ಉತ್ತರ ಕನ್ನಡ ಜಿಲ್ಲೆಯ ರಾಜ ಮನೆತನಗಳು-ಶಾಸನಗಳು, ಕವಿ ಕಾವ್ಯ ಸಮಯ,
ಮಾತು ಮಥನ, ಶಿರಸಿ ತಾಲೂಕು ಅಭಿವೃದ್ಧಿ-ಕನಸು ಮತ್ತು ವಾಸ್ತವ, ಕವಿ ಕಾವ್ಯ ಕುಂಚ, ಜಿಲ್ಲೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ತಲ್ಲಣಗಳು, ಸಮ್ಮೇಳನ ಅಧ್ಯಕ್ಷರ ಸಾಹಿತ್ಯ ಅವಲೋಕನ ಮತ್ತು ಸಂವಾದ ಗೋಷ್ಠಿಗಳು ನಡೆಯಲಿದ್ದು ಎರಡನೇ ದಿನದ ಕೊನೆಯಲ್ಲಿ ಸಮಾರೋಪ ಸಮಾರಂಭ, ಗಣ್ಯರಿಗೆ ಸನ್ಮಾನ ದೊಂದಿಗೆ ಸಮ್ಮೇಳನಕ್ಕೆ ತೆರ ಬೀಳಲಿದೆ.
ಸಮ್ಮೇಳನಕ್ಕೆ ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯಾಸಕ್ತರ ಕೊರತೆ ಎದ್ದು ತೋರುತ್ತಿದ್ದು ಶಿರಸಿ ಸಮ್ಮೇಳನ ಸಾಹಿತ್ಯ ಸಕ್ತರ ಬರ ನೀಗಿಸುವುದೇ ? ಎಂಬುದಕ್ಕೆ ರಂಗಧಾಮದ ನೆಮ್ಮದಿ ಆವರಣ ಸಾಕ್ಷಿಯಾಗಲಿದೆ.